ಬೀದರ್: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರಭಾವಿ ನಾಯಕ, ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಈ ವಿಚಾರದಲ್ಲಿ ಮಹತ್ವದ ಹಾಗೂ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇನ್ಮುಂದೆ ಲಿಂಗಾಯತ ಧರ್ಮದ ಪ್ರತ್ಯೇಕ ಹೋರಾಟಕ್ಕೆ ತಾವೆಂದೂ ಹೋಗುವುದಿಲ್ಲ ಎಂದು ಘೋಷಿಸುವ ಮೂಲಕ ಚಳವಳಿಯ ಹೋರಾಟದಿಂದ ಹಿಂದೆ ಸರಿಯುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಬೀದರ್ ಜಿಲ್ಲೆಯ ಐತಿಹಾಸಿಕ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿದ್ದ 25ನೇ ಕಲ್ಯಾಣ ಪರ್ವ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ತಮ್ಮ ಮುಂದಿನ ನಿಲುವನ್ನು ಸ್ಪಷ್ಟಪಡಿಸಿದರು.
ಇನ್ಮುಂದೆ ಲಿಂಗಾಯತ ಧರ್ಮದ ಬಗ್ಗೆ ಹೋರಾಟ ಮಾಡುವುದಕ್ಕೆ ನಾನು ಹೋಗುವುದಿಲ್ಲ. ನಮ್ಮ ಅಸ್ಮಿತೆ ಏನಿದೆ ಎಂಬುದನ್ನು ಪೂಜ್ಯ ಸ್ವಾಮೀಜಿಗಳಿಗೆ ಹಾಗೂ ನಮ್ಮ ಮುಂದಿನ ಯುವ ಪೀಳಿಗೆಗೆ ಬಿಡುತ್ತೇನೆ. ಈ ಬಗ್ಗೆ ಸಮಾಜವೇ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿ ಎಂದು ತಿಳಿಸಿದರು.
ಕಲ್ಯಾಣ ಪರ್ವದ ವೇದಿಕೆಯಲ್ಲಿ ಲಿಂಗಾಯತ ಹಾಗೂ ವೀರಶೈವ-ಲಿಂಗಾಯತ ಎರಡೂ ಒಂದೇ ಎಂದು ಪ್ರತಿಪಾದಿಸಿದ ಎಂ.ಬಿ. ಪಾಟೀಲ್, ಸಮಾಜವನ್ನು ವಿಭಜಿಸದೆ ಪರಸ್ಪರ ಸಮನ್ವಯದೊಂದಿಗೆ ಮುನ್ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
Laxmi News 24×7