ಕಿತ್ತೂರು ಉತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ವೀರರಾಣಿ ಕಿತ್ತೂರು ಚನ್ನಮ್ಮಾಜಿಯವರ ಪುತ್ಥಳಿಯ ಬಲಗೈ ಮುರಿದು ಬಿದ್ದಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಣಿ ಚನ್ನಮ್ಮಾಜಿ ಖಡ್ಗ ಹಿಡಿದಿದ್ದ ಬಲಗೈ ತುಂಡಾಗಿ ಬಿದ್ದಿರುವುದು ಚನ್ನಮ್ಮಾಜಿ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಿತ್ತೂರಿಗೆ ಭೇಟಿ ನೀಡಿ ರಾಣಿ ಚನ್ನಮ್ಮಾಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದರು. ಆದರೆ, ಇದೀಗ ಪುತ್ಥಳಿಯ ಕೈ ಮುರಿದು ಬಿದ್ದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಕಲಗೌಡ ಪಾಟೀಲ, ಡಿವೈಎಸ್ಪಿ ವೀರಯ್ಯ ಹಿರೇಮಠ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಭರತ್ ಎಸ್. ಹಾಗೂ ಪುರಸಭೆ ಮುಖ್ಯಾಧಿಕಾರಿ ಮಲಯ್ಯ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ನಡೆಯಲಿರುವ ಕಿತ್ತೂರು ಉತ್ಸವಕ್ಕೂ ಮುನ್ನವೇ ಈ ಘಟನೆ ಸಂಭವಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಪುತ್ಥಳಿಯ ಕೈ ಮುರಿಯಲು ಕಾರಣವೇನು? ಇದು ಹಳೆಯ ಮೂರ್ತಿಯಾಗಿರುವುದರಿಂದ ಸಂಭವಿಸಿದ ಹಾನಿಯೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.
Laxmi News 24×7