ಬಾಗಲಕೋಟೆ: ರೋಗಿಗಳ ಗುಣಮುಖತೆಗೆ ರೋಗದ ಲಕ್ಷಣಗಳ ಜೊತೆಗೆ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು, ಆಳವಾದ ಅಧ್ಯಯನ ಹಾಗೂ ಸಮಗ್ರ ಚಿಕಿತ್ಸಾ ವಿಧಾನಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಮುಂಬೈನ ಖ್ಯಾತ ಹೋಮಿಯೋಪಥಿ ತಜ್ಞ ವೈದ್ಯ ಹಾಗೂ ಸಂಶೋಧಕ ಡಾ. ಶ್ರೀಪಾದ ಖೆಡೇಕರ ಹೇಳಿದರು.
ನಗರದ ನವನಗರದಲ್ಲಿರುವ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಭವ್ಯ ಶತಾಬ್ದಿ ಸಭಾಭವನದಲ್ಲಿ ಬಿ.ವಿ.ವಿ. ಸಂಘದ ಬಿ.ವಿ.ವಿ.ಎಸ್. ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಗ್ಲೋಬ್ ಇನ್ ಗ್ಲೋಬ್ಯೂಲ್ ೨.೦’ ರ ಎರಡನೇ ದಿನದ ಮೊದಲನೆ ಉಪನ್ಯಾಸದಲ್ಲಿ ಹೋಮಿಯೋಪಥಿಕ ವೈದ್ಯ ಪದ್ದತಿಯ ಮಿಯಾಸಮ್ ಸಿದ್ದಾಂತ್ ಕುರಿತು ಅವರು ಮಾತನಾಡಿದರು.
ಕೆಲವು ರೋಗಗಳು ಚಿಕಿತ್ಸೆಯ ನಂತರವೂ ಮರುಕಳಿಸುವುದಕ್ಕೆ ಕಾರಣಗಳನ್ನು ಪತ್ತೆಹಚ್ಚಲು ವೈದ್ಯರು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ನೀಡಬೇಕು. ರೋಗಿಯ ಆರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವ ಮೂಲಕ ಚಿಕಿತ್ಸೆಯ ವಿಧಾನವನ್ನು ನಿರ್ಧರಿಸುವುದು ಮುಖ್ಯವಾಗಿದೆ, ಹೋಮಿಯೋಪಥಿ ಚಿಕಿತ್ಸೆಯ ತತ್ವಗಳು, ಮಿಯಾಸಮ್ ಪರಿಕಲ್ಪನೆ, ರೋಗಗಳ ಬೆಳವಣಿಗೆ ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ವಿವರಿಸಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಆಧುನಿಕ ರೋಗನಿರ್ಣಯ ವಿಧಾನಗಳ ಮಹತ್ವವನ್ನು ಪ್ರಸ್ತಾಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಲಂಡನ್ನಿನ ಡಾ. ಹಾನಿಮನ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಹೀರಾಲಾಲ ಅಗರವಾಲ್ ಮಾತನಾಡಿ ಹೋಮಿಯೋಪಥಿ ವೈದ್ಯಕೀಯ ಪದ್ಧತಿ ನಮಗೆ ದೊರೆತಿರುವ ಅಮೂಲ್ಯ ಕೊಡುಗೆಯಾಗಿದ್ದು, ಅದರ ಮೂಲ ತತ್ವಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಜೊತೆಗೆ ಆಧುನಿಕ ವೈಜ್ಞಾನಿಕ ಬೆಳವಣಿಗೆಗಳೊಂದಿಗೆ ಸಮನ್ವಯಗೊಳಿಸುವ ಅಗತ್ಯವಿದೆ, ವೈದ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಕ್ಲಿನಿಕಲ್ ಅನುಭವಗಳ ವಿಶ್ಲೇಷಣೆ ಮತ್ತು ವೈಜ್ಞಾನಿಕ ವಿಚಾರಣೆಗೆ ಆದ್ಯತೆ ನೀಡಬೇಕು. ಹೋಮಿಯೋಪಥಿಯ ಮೂಲ ತತ್ವಗಳನ್ನು ಮೊದಲು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಈ ಕ್ಷೇತ್ರದಲ್ಲಿ ವಿವಿಧ ಲೇಖಕರು ಹಾಗೂ ತಜ್ಞರು ಮಂಡಿಸಿರುವ ಅಭಿಪ್ರಾಯಗಳನ್ನು ಅಧ್ಯಯನ ಮಾಡುವ ಮೂಲಕ ವಿಷಯದ ಕುರಿತು ಸ್ಪಷ್ಟತೆ ಬೆಳೆಸಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಕೆಲವು ವಿಷಯಗಳ ಕುರಿತು ಭಿನ್ನಾಭಿಪ್ರಾಯ ಮತ್ತು ಗೊಂದಲಗಳಿರುವುದು ಸಹಜ. ಅಂತಹ ಸಂದರ್ಭದಲ್ಲಿ ಪೂರ್ವಗ್ರಹಗಳನ್ನು ಬದಿಗಿಟ್ಟು ಮುಕ್ತ ಮನಸ್ಸಿನಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು, ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಆರಂಭದಲ್ಲಿ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನ ಮತ್ತು ಅನುಭವವನ್ನು ವೃದ್ಧಿಸಿಕೊಂಡು ವೃತ್ತಿಯಲ್ಲಿ ನೆಲೆ ಕಂಡುಕೊAಡ ನಂತರ ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು, ಬಸವೇಶ್ವರ ವಿದ್ಯಾವರ್ಧಕ ಸಂಘದ ಶಿಕ್ಷಣ ಕ್ಷೇತ್ರದ ಕೊಡುಗೆಯನ್ನು ಸ್ಮರಿಸಿದ ಅವರು, ಇಂತಹ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಮ್ಮೇಳನಗಳು ಹೋಮಿಯೋಪಥಿ ವೈದ್ಯರ ಜ್ಞಾನವೃದ್ಧಿಗೆ, ವೃತ್ತಿಪರ ಕೌಶಲ ಸುಧಾರಣೆಗೆ ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಆಳವಾದ ಚಿಂತನೆಗೆ ಸಹಕಾರಿಯಾಗಲಿವೆ ಎಂಬ ಆಶಯ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಪ್ರಾಚಾರ್ಯ ಅರುಣ ಹೂಲಿ ಇದ್ದರು, ಡಾ.ತೃಪ್ತಿ ಶಿಂಧೆ ಸ್ವಾಗತಿಸಿದರು, ಡಾ.ರಾಜೇಂದ್ರ ಪಾಟೀಲ ಪರಿಚಯಿಸಿದರು,
ಸಾಧಕರಿಗೆ ಸನ್ಮಾನ : ಇದೇ ಸಂಧರ್ಭದಲ್ಲಿ ಸಂಘ ಕಟ್ಟಡ ವಿಭಾಗದ ನಿರ್ದೇಶಕರಾದ ಮಹೇಶ ಕಕರಡ್ಡಿ, ವಾಹನ ವಿಭಾಗದ ಅಶೋಕ ರೇಣುಕೊಪ್ಪ ಕರಡಿ, ಪ್ರಾಚಾರ್ಯ ಅರುಣ ಹೂಲಿ ಅವರು ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.
ಗೋಷ್ಠಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿ ವೈದ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Laxmi News 24×7