ಜೈಪುರ: ರಾಜಸ್ಥಾನದ ಭೋಂಡಾ ಗ್ರಾಮದಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ ಬಿಜೆಪಿ ಮಾಜಿ ಶಾಸಕನನ್ನೇ ಗ್ರಾಮಸ್ಥರು ಹೊಡೆದು ಕೊಂದಿದ್ದಾರೆ.
ರಾಜಸ್ತಾನದ ಭರತ್‌ಪುರ ಜಿಲ್ಲೆಯ ಭೋಂಡಾ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಭೋಂಡಾ ಗ್ರಾಮದ ಸಮೀಪದ ತಮ್ಮ ಗಣಿಗಾರಿಕೆ ಗುತ್ತಿಗೆ ಪ್ರದೇಶಕ್ಕೆ ಅಟರ್ ಸಿಂಗ್ ಭದಾನಾ ಅವರು ತೆರಳಿದ್ದರು. ಈ ವೇಳೆ, ನೂರಾರು ಗ್ರಾಮಸ್ಥರು ಜಮಾಯಿಸಿ, ಬಡಿಗೆ, ಕ್ಲಲುಗಳಿಂದ ಹಲ್ಲೆ ಮಾಡಿದ್ದಾರೆ.
ಘಟನೆ ವೇಳೆ ಅವರ ಅಂಗರಕ್ಷಕ ಗಗನ್ ಶರ್ಮಾ ಕೂಡ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಭದಾನಾರನ್ನು ಮೊದಲಿಗೆ ಸಮುದಾಯ ಆರೋಗ್ಯ ಕೇಂದ್ರ, ನಂತರ ಜೈಪುರಕ್ಕೆ ಕಳಿಸಲಾಗಿತ್ತು. ಆದರೆ, ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಹರಿಯಾಣ ಮೂಲದ ಅಟರ್ ಸಿಂಗ್ ಭದಾನಾ ಅವರು ಭೋಂಡಾ ಗ್ರಾಮದ ಬೆಟ್ಟಗಳ ಸಮೀಪ ಗಣಿಗಾರಿಕೆ ಗುತ್ತಿಗೆ ಮತ್ತು ಕ್ರಷರ್ ಘಟಕ ಹೊಂದಿದ್ದರು. ಗಣಿಗಾರಿಕೆ ಗುತ್ತಿಗೆಯು ಅವರ ಪತ್ನಿ ಕಮಲೇಶ್ ಭದಾನಾ ಅವರ ಹೆಸರಿನಲ್ಲಿತ್ತು. ಭೋಂಡಾ ಮತ್ತು ರಾಯ್‌ಪುರ ಗ್ರಾಮಗಳ ನಿವಾಸಿಗಳು ಈ ಗಣಿಗಾರಿಕೆ ಚಟುವಟಿಕೆಗಳು ಹಾಗೂ ಕ್ರಷರ್ ಘಟಕದ ವಿರುದ್ಧ ಕಳೆದ ಎರಡು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಹಲವು ಬಾರಿ ಧರಣಿ ನಡೆಸಿದ್ದಲ್ಲದೆ, ಗಣಿಗಾರಿಕೆ ಪ್ರದೇಶಕ್ಕೆ ತೆರಳುವ ರಸ್ತೆಯನ್ನೂ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು.
Laxmi News 24×7