Breaking News

38 ಸಾವಿರ ಕೋಟಿ ಬಾಕಿ ಹಣ ಕೊಡಿ, ಶೇ.70 ರಷ್ಟು ಶಾಸಕರಿಂದ ಕಮಿಷನ್‌ ಕಾಟ: ಸರ್ಕಾರದ ವಿರುದ್ಧ ಸಿಡಿದ ಗುತ್ತಿಗೆದಾರರು

Spread the love

ಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ 1.5 ಲಕ್ಷ ಗುತ್ತಿಗೆದಾರರು ಬಿಲ್ ಪಾವತಿಯಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರಕ್ಕೆ ನಮ್ಮ ಕಷ್ಟ ತೀರಿಸಲು ಆಗದಿದ್ದರೆ ನಮಗೆ ಒಂದೊಂದು ಬಾಟಲ್ ವಿಷ ಕೊಟ್ಟುಬಿಡಿ, ಕುಡಿದು ಸತ್ತು ಹೋಗುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ರಾಜ್ಯ ಸರ್ಕಾರದ ವಿರುದ್ಧ ನೇರ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ  ಕಾರ್ಯವೈಖರಿ, ಶಾಸಕರ ಕಮಿಷನ್ ದಂಧೆ ಹಾಗೂ ಬಾಕಿ ಬಿಲ್ ಪಾವತಿಯಾಗದ ಕುರಿತು ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದರು.

ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಡಿ.ಕೆ. ಶಿವಕುಮಾರ್  ಅವರು ನಮ್ಮ ಪ್ರತಿಭಟನಾ ಸ್ಥಳಕ್ಕೆ ಬಂದು ನಿಮ್ಮ ಹೋರಾಟದಿಂದಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅಧಿಕಾರಕ್ಕೆ ಬಂದ ಮೇಲೆ ನಿಮಗೆ ಸಹಾಯ ಮಾಡದಿದ್ದರೆ ನಮಗೆ ಒಳ್ಳೆಯದಾಗಲ್ಲ ಎಂದು ಭರವಸೆ ನೀಡಿದ್ದರು. ಆದರೆ ಈಗ ಸರ್ಕಾರ ಬಂದ ಮೇಲೆ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಜೂನ್ ತಿಂಗಳಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ಬಾಕಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಮೂರು ತಿಂಗಳಾದರೂ ಹಣ ಬಿಡುಗಡೆಯಾಗಿಲ್ಲ. ಇತ್ತೀಚೆಗೆ ಭೇಟಿಯಾದಾಗ ಡಿಕೆ ಶಿವಕುಮಾರ್‌ ಕನಿಷ್ಠ 5 ನಿಮಿಷವೂ ಸರಿಯಾಗಿ ಸಮಯ ಕೊಡದೆ ತಾತ್ಸಾರ ತೋರಿದ್ದಾರೆ. ಸಿಎಂ ತಮ್ಮದೇ ಲೋಕದಲ್ಲಿದ್ದಾರೆ ಎಂದು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಹಿಂದೆ ಚುನಾವಣೆ ಬಂದಾಗ ಮಾತ್ರ ದುಡ್ಡು ಕೇಳುತ್ತಿದ್ದರು. ಆದರೆ ಈಗ ಶೇ. 70ರಷ್ಟು ಶಾಸಕರು ಪ್ರತಿಯೊಂದು ಕಾಮಗಾರಿಯಲ್ಲೂ ಮೂಗು ತೂರಿಸುತ್ತಿದ್ದಾರೆ. ಟೆಂಡರ್ ಮಂಜೂರಾದ ತಕ್ಷಣ ಶಾಸಕರ ಬಳಿ ಹೋಗಬೇಕು, ಪೇಮೆಂಟ್ ಆದ ತಕ್ಷಣ ಅವರಿಗೆ ಪಾಲು ತಲುಪಿಸಬೇಕು. ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಮೂಲಕ ಕಮಿಷನ್‌ಗೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಂತ್ರಿಗಳಿಗೂ ಕಮಿಷನ್ ಹೋಗುತ್ತಿದೆ. ಹೊಸ ಸಚಿವರಿಗೆ ಪೇಮೆಂಟ್ ಇನ್ನೂ ತಲುಪಿಲ್ಲ. ಸತೀಶ್ ಜಾರಕಿಹೊಳಿ ಅವರ ಇಲಾಖೆ ಹಾಗೂ ಬಿಬಿಎಂಪಿ ಹೊರತುಪಡಿಸಿದರೆ ಉಳಿದೆಲ್ಲಾ ಇಲಾಖೆಗಳಲ್ಲಿ ಕಮಿಷನ್ ವಹಿವಾಟು ಎಗ್ಗಿಲ್ಲದೆ ಸಾಗಿದೆ ಎಂದು ದೂರಿದರು.

ಸಿಎಂ ಅನುಮತಿ ಕೊಟ್ಟರೆ ಕಮಿಷನ್ ಪಡೆಯುತ್ತಿರುವವರ ಸಂಪೂರ್ಣ ಪಟ್ಟಿಯನ್ನೇ ಬಿಡುಗಡೆ ಮಾಡುತ್ತೇವೆ. ಕೆಂಪಣ್ಣ ಅವರು ಈ ಹಿಂದೆ 40% ಕಮಿಷನ್ ಬಗ್ಗೆ ಹೇಳಿಕೆ ಕೊಟ್ಟು ಕೆಂಪಣ್ಣ ತಪ್ಪು ಮಾಡಿದರು. ಸಿದ್ದರಾಮಯ್ಯ ಅವರು ಆ ಹೇಳಿಕೆಯನ್ನು ರಾಜಕೀಯವಾಗಿ ಚೆನ್ನಾಗಿ ಬಳಸಿಕೊಂಡರು, ಆದರೆ ನಮಗೆ ನಾಲ್ಕು ವರ್ಷಗಳಿಂದ ಬಿಲ್ ಕ್ಲಿಯರ್ ಆಗದೆ ಸಂಕಷ್ಟ ಮುಂದುವರಿದಿದೆ. ಗುತ್ತಿಗೆದಾರರು ಬೆವರು ಸುರಿಸಿ ಮಾಡಿದ ಕೆಲಸದ ಹಣವನ್ನು ತಡೆಹಿಡಿದು, ಆ ದುಡ್ಡಿನಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಡೆಸುವುದು ಬೇಡ ಎಂದರು.

ಸುದ್ದಿಗೋಷ್ಠಿಯ ವೇಳೆ ಆಣೆ-ಪ್ರಮಾಣದ ಸವಾಲು ಹಾಕಿದ ಮಂಜುನಾಥ್, “ಕಮಿಷನ್ ಹಣ ತೆಗೆದುಕೊಂಡಿಲ್ಲ ಎಂದು ಶಾಸಕರು ಎಲ್ಲಿಗೆ ಬೇಕಾದರೂ ಬಂದು ಧರ್ಮಸ್ಥಳದಲ್ಲೋ ಅಥವಾ ದೇವರ ಮುಂದೆಯೋ ಆಣೆ ಮಾಡಲಿ. ನಾವು ಆಣೆ ಮಾಡಲು ಸಿದ್ಧರಿದ್ದೇವೆ, ಶಾಸಕರು ಇದಕ್ಕೆ ಸಿದ್ಧರಿದ್ದಾರೆಯೇ?” ಎಂದು ನೇರ ಸವಾಲೆಸೆದರು.

ಡಿಸಿ ಕಚೇರಿಗಳಿಗೆ ಪಾದಯಾತ್ರೆ
ಎಲ್ಲಾ ಇಲಾಖೆಗಳ ಸಭೆ ಕರೆಯುವ ಸಿಎಂ ನಮ್ಮ ಇಲಾಖೆಯ ಸಭೆಯನ್ನು ಏಕೆ ಕರೆಯುತ್ತಿಲ್ಲ? ತಮ್ಮ ಸರ್ಕಾರದ ಬಂಡವಾಳ ಎಲ್ಲಿ ಹೊರಗೆ ಬರುತ್ತದೆಯೋ ಎಂಬ ಭಯವೇ?” ಎಂದು ಪ್ರಶ್ನಿಸಿದ ಅವರು, ಬಾಕಿ ಬಿಲ್ ಪಾವತಿಗೆ ನವೆಂಬರ್‌ವರೆಗೆ ಗಡುವು ನೀಡಿದರು. ಅಷ್ಟರೊಳಗೆ ಮುಖ್ಯಮಂತ್ರಿಗಳು ಸಭೆ ಕರೆದು ಹಣ ಬಿಡುಗಡೆ ಮಾಡದಿದ್ದರೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗುತ್ತಿಗೆದಾರರು ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ಪಾದಯಾತ್ರೆ ನಡೆಸಿ ಉಗ್ರ ಹೋರಾಟ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಯಾವ್ಯಾವ ಇಲಾಖೆ ಎಷ್ಟೆಷ್ಟು ಕೋಟಿ ರೂ. ಬಾಕಿ?
ಜಲಸಂಪನ್ಮೂಲ- 14,000
ಪಿಡಬ್ಲ್ಯೂಡಿ- 8,370.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – 3000
ಸಣ್ಣ ನೀರಾವರಿ ಇಲಾಖೆ -3,600
ನಗರಾಭಿವೃದ್ಧಿ ಇಲಾಖೆ -1800
ವಸತಿ ಮತ್ತು ವಕ್ಫ್ – 2,600.
ಕಾರ್ಮಿಕ ಇಲಾಖೆ – 2,000
ಬಿಬಿಎಂಪಿ – 2,600


Spread the love

About Laxminews 24x7

Check Also

ಬಸವನ ಬಾಗೇವಾಡಿಯಲ್ಲಿ 3.5 ತೀವ್ರತೆಯ ಭೂಕಂಪನ

Spread the loveವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ  ತಾಲೂಕಿನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ. ರಾಷ್ಟ್ರೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ