Breaking News

ಪಾಕ್ ವಾಯುಪ್ರದೇಶಕ್ಕೆ ಪರ್ಯಾಯ – ಚೀನಾದ ವಾಯುಮಾರ್ಗ ಬಳಸಲು ಭಾರತ ಮಾತುಕತೆ

Spread the love

ನವದೆಹಲಿ: ಪಾಕಿಸ್ತಾನ  ತನ್ನ ವಾಯುಪ್ರದೇಶವನ್ನು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ನಿರ್ಬಂಧಿಸಿರುವ ಹಿನ್ನೆಲೆ ಪರ್ಯಾಯ ವಾಯುಮಾರ್ಗ ಬಳಸುವ ಕುರಿತು ಭಾರತ  ಚೀನಾ  ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತೀಯ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ತಪ್ಪಿಸಿ ಸಂಚರಿಸಲು ಚೀನಾದ ಚಿನ್‌ಜಿಯಾಂಗ್ ವಾಯುಸೀಮೆ ಬಳಸುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ಚೀನಾದ ಹೊತಾನ್ ಪ್ರದೇಶದ ಮಾರ್ಗ ಮೂಲಕ ವಿಮಾನಗಳ ಕಾರ್ಯಾಚರಣೆ ನಡೆಸುವ ಕುರಿತು ಕಳೆದ ಒಂದು ವರ್ಷದಿಂದ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಪರ್ಯಾಯ ಮಾರ್ಗಗಳ ಕುರಿತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚೀನಾದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಾರತ – ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ.

ಇದರ ನಡುವೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್  ಅವರು ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅವರ ಭಾರತ ಭೇಟಿಯ ಕೆಲವೇ ದಿನಗಳ ಮುನ್ನ ಚೀನಾ ಸದರನ್ ಏರ್‌ಲೈನ್ಸ್ ಮಹತ್ವದ ಘೋಷಣೆ ಮಾಡಿತ್ತು. ಸೆಪ್ಟೆಂಬರ್ 21ರಿಂದ ಗುವಾಂಗ್‌ಝೌ – ನವದೆಹಲಿ ನೇರ ವಿಮಾನ ಸೇವೆಯನ್ನು ಪುನರಾರಂಭಿಸುವುದಾಗಿ ಚೀನಾ ಸದರನ್ ಏರ್‌ಲೈನ್ಸ್ ಘೋಷಿಸಿತ್ತು. ಕೋವಿಡ್ ಸಾಂಕ್ರಾಮಿಕ ಹಾಗೂ ಭಾರತ – ಚೀನಾ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ನೇರ ವಿಮಾನ ಸೇವೆಗಳನ್ನು ಹಂತ ಹಂತವಾಗಿ ಪುನರಾರಂಭಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ದಕ್ಷಿಣ ಏಷ್ಯಾದಾದ್ಯಂತ ಒಟ್ಟು 8 ಮಾರ್ಗಗಳಲ್ಲಿ ವಾರಕ್ಕೆ 100ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುವುದಾಗಿ ಚೀನಾ ಸದರನ್ ಏರ್‌ಲೈನ್ಸ್ ತಿಳಿಸಿದೆ.

ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸಂಪರ್ಕ ಪುನರಾರಂಭಿಸುವಲ್ಲಿ ಇಂಡಿಗೊ ಕೂಡ ಪ್ರಮುಖ ಹೆಜ್ಜೆ ಇಟ್ಟಿತ್ತು. 2025ರ ಅಕ್ಟೋಬರ್‌ನಲ್ಲಿ ಕೋಲ್ಕತ್ತ – ಗುವಾಂಗ್‌ಝೌ ಹಾಗೂ ನವೆಂಬರ್‌ನಲ್ಲಿ ದೆಹಲಿ – ಗುವಾಂಗ್‌ಝೌ ಮಾರ್ಗಗಳಲ್ಲಿ ಇಂಡಿಗೊ ನೇರ ವಿಮಾನ ಸೇವೆ ಆರಂಭಿಸಿತ್ತು. ಇದೇ ವೇಳೆ, ಏರ್ ಇಂಡಿಯಾ ಕೂಡ ಸುಮಾರು ಆರು ವರ್ಷಗಳ ಬಳಿಕ ಫೆಬ್ರವರಿಯಲ್ಲಿ ದೆಹಲಿ – ಶಾಂಘೈ ನೇರ ವಿಮಾನ ಸೇವೆಯನ್ನು ಮರು ಆರಂಭಿಸಿತ್ತು. ಸದ್ಯ ಈ ಮಾರ್ಗದಲ್ಲಿ ವಾರಕ್ಕೆ ಐದು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.


Spread the love

About Laxminews 24x7

Check Also

ಸಿಎಂ ಆಗಿದ್ದಾಗಲೇ ನೈಸ್‌ ರದ್ದು ಮಾಡಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ: ಹೆಚ್‌ಡಿಕೆಗೆ ಕೃಷ್ಣ ಬೈರೇಗೌಡ ತಿರುಗೇಟು

Spread the loveಬೆಂಗಳೂರು: ಹೆಚ್‌ಡಿ ಕುಮಾರಸ್ವಾಮಿ ಅವರೇ ಈ ಹಿಂದೆ ಮುಖ್ಯಮಂತ್ರಿಯಾಗಿದ್ದರು. ಪೆನ್ನು-ಪೇಪರ್ ಕೈಯಲ್ಲಿದ್ದಾಗಲೇ ನೈಸ್‌ ಯೋಜನೆಯನ್ನು  ರದ್ದು ಮಾಡಿದ್ದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ