ಉಡುಪಿ: ಕಂಬಳದ ಕರೆಯಲ್ಲಿ ಮಿಂಚಿನ ವೇಗದೊಂದಿಗೆ ರೋಷಾವೇಶದ ಓಟ ಪ್ರದರ್ಶಿಸಿ ಇತಿಹಾಸ ಬರೆದಿದ್ದ ತುಳುನಾಡಿನ ಹೆಮ್ಮೆಯ ಪ್ರಸಿದ್ಧ ಕೋಣ ‘ನಂದಳಿಕೆ ಪಾಂಡು’ ತನ್ನ 26ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದೆ. ದೇಶ-ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದ ಈ ಅಪ್ರತಿಮ ಸಾಧಕ ಕೋಣದ ಅಗಲಿಕೆಯಿಂದಾಗಿ ಕಂಬಳ ಪ್ರಿಯರು ಹಾಗೂ ಕರಾವಳಿಯ ಜಾನಪದ ಕ್ರೀಡಾಲೋಕ ತೀವ್ರ ಶೋಕದಲ್ಲಿ ಮುಳುಗಿದೆ.
ನಂದಳಿಕೆ ಶ್ರೀಕಾಂತ ಭಟ್ ಅವರ ಪ್ರೀತಿಯ ಕೋಣವಾಗಿದ್ದ ಪಾಂಡು ಕಂಬಳದ ಅಂಗಳದಲ್ಲಿ ಕೇವಲ ಕೋಣವಾಗಿರದೆ ಒಂದು ಜನಪ್ರಿಯ ಬ್ರ್ಯಾಂಡ್ ಆಗಿ ಹೊರಹೊಮ್ಮಿತ್ತು. ಸಾಮಾನ್ಯವಾಗಿ ಕಂಬಳದ ಕೋಣಗಳು ಕೇವಲ ಎಡ ಅಥವಾ ಬಲ ಬದಿಯಲ್ಲಿ ಮಾತ್ರ ಓಡುತ್ತವೆ. ಆದರೆ ಪಾಂಡು ಎರಡೂ ಬದಿಗಳಲ್ಲಿ (ಎಡ ಮತ್ತು ಬಲ) ಅದ್ಭುತ ಸಮತೋಲನದೊಂದಿಗೆ ಓಡುವ ಅಸಾಧಾರಣ ಸಾಮರ್ಥ್ಯ ಹೊಂದಿತ್ತು.
‘ಕುಟ್ಟಿ’ ಎಂಬ ಮತ್ತೊಂದು ಬಲಿಷ್ಠ ಕೋಣದ ಜತೆಗೂಡಿ ಪಾಂಡು ಕಟ್ಟಿದ ಜೋಡಿ ಕಂಬಳ ಇತಿಹಾಸದಲ್ಲೇ ಅಜೇಯವಾಗಿ ಗುರುತಿಸಿಕೊಂಡಿತ್ತು. ‘ಪಾಂಡು-ಕುಟ್ಟಿ’ ಜೋಡಿ ಕಣಕ್ಕಿಳಿದರೆ ಗೆಲುವು ನಿಶ್ಚಿತ ಎಂಬ ಮಾತು ತುಳುನಾಡಿನಲ್ಲಿ ಮನೆಮಾತಾಗಿತ್ತು. ಪ್ರತಿಯೊಂದು ಸೀಸನ್‌ನಲ್ಲೂ ಸರಣಿ ಶ್ರೇಷ್ಠ ಗೌರವದೊಂದಿಗೆ ಬರೋಬ್ಬರಿ 201 ಪದಕಗಳನ್ನು ಬಾಚಿಕೊಂಡ ಅಪರೂಪದ ಕೀರ್ತಿ ಪಾಂಡುವಿಗೆ ಸಲ್ಲುತ್ತದೆ.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಹಾಲಿ ಮುಖ್ಯಮಂತ್ರಿ ಹಾಗೂ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪಾಂಡುವಿಗೆ ವಿಶೇಷ ಗೌರವ ಸಮರ್ಪಿಸಲಾಗಿತ್ತು.
201 ಹೂಗಳನ್ನು ಇರಿಸಿ ಗೌರವ
ಪಾಂಡು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಂದಳಿಕೆಗೆ ಸಾವಿರಾರು ಅಭಿಮಾನಿಗಳು, ಕಂಬಳ ಆಯೋಜಕರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಧಾವಿಸಿ ಅಂತಿಮ ದರ್ಶನ ಪಡೆದರು. ಅಂತ್ಯಕ್ರಿಯೆಗೂ ಮುನ್ನ ಪಾಂಡುವಿಗೆ ಸಾಂಪ್ರದಾಯಿಕವಾಗಿ ಸ್ನಾನ ಮಾಡಿಸಿ, ವಸ್ತ್ರ ಹಾಗೂ ಹೂಮಾಲೆಗಳಿಂದ ಅಲಂಕರಿಸಿ, ಕಹಳೆ ಊದಿ ಗೌರವ ಸಲ್ಲಿಸಲಾಯಿತು.
ನಿತ್ಯ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪರಿಚಾರಕರು ಕೊನೆಯ ಬಾರಿಗೆ ಎಣ್ಣೆ ಹಚ್ಚಿ ಕಣ್ಣೀರಿಟ್ಟರು. ವಿಶೇಷವೆಂದರೆ, ಪಾಂಡು ಕಂಬಳದ ಕರೆಯಲ್ಲಿ ಗೆದ್ದ 201 ಪದಕಗಳ ಸಂಕೇತವಾಗಿ ಅದರ ದೇಹದ ಮೇಲೆ 201 ಹೂಗಳನ್ನು ಇರಿಸಿ ಭಾವುಕ ಗೌರವ ಸಲ್ಲಿಸಲಾಯಿತು.
ಯಜಮಾನನ ಭಾವುಕ ಮಾತು:
ಅಂತ್ಯಕ್ರಿಯೆಯ ವೇಳೆ ಪಾಂಡುವಿನ ಮಾಲಕರಾದ ಶ್ರೀಕಾಂತ ಭಟ್ ಮತ್ತು ಅವರ ಕುಟುಂಬಸ್ಥರ ರೋದನ ಮುಗಿಲುಮುಟ್ಟಿತ್ತು. ಬೊಗಸೆಯ ಮಣ್ಣನ್ನು ಹಾಕುತ್ತಾ ಕಣ್ಣೀರಿಟ್ಟ ಶ್ರೀಕಾಂತ ಭಟ್, “ಪಾಂಡು, ನೀನು ನನಗಾಗಿ ಅಪಾರ ಸಾಧನೆ ಮಾಡಿದ್ದೀಯಾ. ನಿನಗೆ ಋಣಿಯಾಗಿದ್ದೇನೆ. ಓಟದ ಆವೇಶದಲ್ಲಿ ಒಂದೆರಡು ಏಟು ಹೊಡೆದಿದ್ದರೆ ನನ್ನನ್ನು ಕ್ಷಮಿಸಿಬಿಡು. ಮುಂದಿನ ಜನ್ಮದಲ್ಲೂ ಕೋಣವಾಗಿ ಹುಟ್ಟುವುದಾದರೆ ನೀನು ನನ್ನದೇ ಕೊಟ್ಟಿಗೆಯಲ್ಲಿ ಹುಟ್ಟಿ ಬಾ” ಎಂದು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನೆರೆದಿದ್ದವರ ಕಣ್ಣಂಚಲ್ಲೂ ನೀರು ತರಿಸಿತು.
Laxmi News 24×7