Breaking News

ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಿಎಂ ಕ್ಷಮೆಯಾಚಿಸಲಿ: ಎ.ಎಸ್.ಪಾಟೀಲ್ ನಡಹಳ್ಳಿ

Spread the love

ಬೆಂಗಳೂರು: ವಿಶೇಷ ಅಧಿವೇಶನದಲ್ಲಿ ರೈತರ ಕುರಿತು ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಮಾಜಿ ಶಾಸಕ ಹಾಗೂ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ  ಅವರು ಆಗ್ರಹಿಸಿದ್ದಾರೆ.

ಬಿಜೆಪಿ  ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಬರದ  ಕುರಿತು ಚರ್ಚೆಗೆ ನಡೆಸಿದ ವಿಶೇಷ ಅಧಿವೇಶನ ಕೇವಲ ನಾಮಕಾವಸ್ತೆಗೆ ನಡೆಯಿತು. ಯಾವುದೇ ಗಂಭೀರತೆ ಮುಖ್ಯಮಂತ್ರಿ ಸೇರಿ ಶಾಸಕರಲ್ಲಿ ಇರಲಿಲ್ಲ. ರಾಜ್ಯದಲ್ಲಿ ಭೀಕರ ಬರ ಇದೆ. ಅಧಿವೇಶನದಲ್ಲಿ ಬರ ಕುರಿತು ಚರ್ಚೆ ಮಾಡುವಾಗ ಕೆಲವೇ ಕೆಲವು ಶಾಸಕರನ್ನು ಹೊರತುಪಡಿಸಿ ಉಳಿದವರಲ್ಲಿ ಗಂಭೀರತೆ ಇರಲಿಲ್ಲ ಎಂದು ಆಕ್ಷೇಪಿಸಿದರು.

ಮಳೆ ಕೊರತೆಯಿಂದ ಮುಂಗಾರು ಬೆಳೆ ನಾಶವಾಗಿದೆ, ಹಿಂಗಾರು ಮಳೆ ಸಹ ಇಲ್ಲ. ಇಂತಹ ಸಂದರ್ಭದಲ್ಲಿ ರೈತರಿಗೆ ಏನು ಸಲಹೆ ಬೇಕು ಎಂಬ ಬಗ್ಗೆ ಕಂದಾಯ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ಏನೂ ಮಾತನಾಡಲಿಲ್ಲ. ಬರ ಎದುರಿಸಲು ಸಾಮೂಹಿಕವಾಗಿ ನಿರ್ಣಯ ತೆಗೆದುಕೊಳ್ಳಬಹುದಿತ್ತು. ಆದರೂ ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಮಾಡಿತು ಎಂದರು.

ಬರ ಕುರಿತು ಆಳಂದ ಶಾಸಕ ಬಿ.ಆರ್.ಪಾಟೀಲ್  ಸೇರಿದಂತೆ ಎಂಟತ್ತು ಶಾಸಕರು ಮಾತ್ರವೇ ಗಂಭೀರವಾಗಿ ಮಾತನಾಡಿದರು. ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವಾಗ ಗಂಭೀರವಾಗಿ ಅಧಿವೇಶನದಲ್ಲಿ ಶಾಸಕರು ಭಾಗವಹಿಸಲಿಲ್ಲ ಎಂದು ದೂರಿದರು.

ಬರದ ಕುರಿತು ಪಕ್ಷಾತೀತವಾಗಿ ಶಾಸಕರು ಚರ್ಚಿಸಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಪ್ರಮುಖವಾಗಿ ಕರ್ನಾಟಕದ ಭೌಗೋಳಿಕ ಪ್ರದೇಶದ ಸಂಪೂರ್ಣ ಚಿತ್ರಣ ಕೊಡುವಲ್ಲಿ ಶಾಸಕರು ವಿಫಲರಾದರು. ಕರಾವಳಿ, ಮಲೆನಾಡು, ಮೈಸೂರು ಕರ್ನಾಟಕ, ಕಿತ್ತೂರು ಕರ್ನಾಟಕ ಹೀಗೆ ಬೇರೆ ಬೇರೆ ಕಡೆ ಬರದ ಪರಿಣಾಮ ಬೇರೆ ಇದೆ. ಇಲ್ಲೆಲ್ಲ ಏನೇನು ಕ್ರಮ ಆಗಬೇಕು ಎಂಬ ಮುಂಜಾಗ್ರತಾ ಕ್ರಮದ ಚರ್ಚೆ ಆಗಲಿಲ್ಲ.

ಈ ಬಾರಿ ಬರಗಾಲ ತೀವ್ರ ಹೊಸದು. ಈ ಬಾರಿಯದು ಹೈಡ್ರೋಲಾಜಿಕಲ್ ಬರ. ಈ ಹಿಂದಿನ ಬರ ಕೃಷಿಗೆ ಸೀಮಿತವಾಗಿತ್ತು. ಇದನ್ನು ಶಾಸಕರು ಅರ್ಥವೇ ಮಾಡಿಕೊಳ್ಳಲಿಲ್ಲ. ಕೆರೆಗಳೆಲ್ಲ ಬತ್ತಿಹೋಗಿವೆ. ಅಂತರ್ಜಲ ಮುಗಿದಿದೆ. ಜಾನುವಾರಿಗೆ ನೀರು ಸಂಗ್ರಹಿಸಿ ಬಳಸಲಾಗುತ್ತಿದೆ ಎಂದು ವಿವರಿಸಿದರು.

ರೈತ ಬೆಳೆದ ಅನ್ನವನ್ನೇ ನಾವೆಲ್ಲ ತಿನ್ನುವುದು
ಬರದ ಬಗ್ಗೆ ಕಂದಾಯ ಸಚಿವರು ಉತ್ತರ ಕೊಡುವಾಗ ರೈತರ ನೋವಿಗೆ ಸ್ಪಂದಿಸುವ ರೀತಿ ಇರಲಿಲ್ಲ. ರೈತರಿಗೆ ಎರಡೂವರೆ ಸಾವಿರ ಘೋಷಣೆ ಮಾಡಿದಾಗ ಕಡಿಮೆ ಆಯ್ತಲ್ಲ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಅದಕ್ಕೆ ಹಗುರವಾಗಿ ಉತ್ತರ ಕೊಟ್ಟರು. ಅಕ್ಕಿ ಕೊಟ್ಟಿದ್ದೇವೆ ಎಂದರು. ಆದರೆ ಅದು ಕೊಟ್ಟಿದ್ದು ಮೋದಿ ಅವರು. ವಿದ್ಯುತ್ ಕೊಡ್ತೀದ್ದೇವೆ ಎಂದರು. ಆದರೆ ವಿದ್ಯುತ್ ಪಡೆದು ಯಾವುದೇ ರೈತರ ಮನೆಯಲ್ಲಿ ಎಸಿ ಹಾಕಿಕೊಂಡು ಮಲಗುತ್ತಿಲ್ಲ. ವಿದ್ಯುತ್‌ನ್ನು ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ. ರಾತ್ರಿ ಎರಡುಮೂರು ಗಂಟೆಗೆ ಕೊಡ್ತಾರೆ. ಆಗ ಜೀವಭಯ ಬಿಟ್ಟು ಜಮೀನಿಗೆ ಹೋಗಬೇಕು. ಆದರೆ ರೈತ ಬೆಳೆದ ಅನ್ನವನ್ನೇ ನಾವೆಲ್ಲ ತಿನ್ನುವುದನ್ನು ಮರೆಯಬಾರದು ಎಂದು ಹೇಳಿದರು.

ರಾಜ್ಯದ ರೈತರಿಗೆ ಮಾಡಿದ ಅವಮಾನ
ಮುಖ್ಯಮಂತ್ರಿಗಳ ಭಾಷಣದಲ್ಲಿ ರೈತರಿಗೆ ಅನುಕಂಪ ತೋರಿಸುವ ಯಾವುದೇ ಮಾತಿರಲಿಲ್ಲ. ಇದು ರಾಜ್ಯದ ಜನರಿಗೆ ಮಾಡಿದ ಅವಮಾನ. ರೈತರ ಪರವಾಗಿ ಸರ್ಕಾರ ಇದೆ ಎಂಬ ಶಬ್ದ ಇರಲಿಲ್ಲ. ಬೆಂಗಳೂರಿನ ಬಗ್ಗೆಯೇ ಹೆಚ್ಚು ಮಾತನಾಡಿದರು. ಸ್ವಾಭಿಮಾನಿ ಕರ್ನಾಟಕದ ಜನರಿಗೆ ನೋವು ತರುವ ರೀತಿ ಇತ್ತು. ಬೆಂಗಳೂರಿಗೆ ಎಲ್ಲಾ ಭಾಗದ ಜನ ಬರ್ತಾರೆ. ಇಲ್ಲೇ ಇರ್ತಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ ಬೆಂಗಳೂರು ಮುಖ್ಯಮಂತ್ರಿಗಳು ಮತ್ತು ಅವರ ತಂದೆಯ ಆಸ್ತಿಯಲ್ಲ. ಇದು ಕರ್ನಾಟಕದ ಆಸ್ತಿ. ನಾವು ಇಲ್ಲಿ ಇರಲು ಹಕ್ಕಿದೆ. ಬೆಂಗಳೂರು ಕಟ್ಟಿದ್ದು ಉತ್ತರ ಕರ್ನಾಟಕದವರು. ವಾಚ್‍ಮನ್, ಮಾಲಿ ಎಲ್ಲರೂ ಉತ್ತರ ಕರ್ನಾಟಕದವರು. ಬಿಎಂಟಿಸಿ ಬಸ್ ಓಡಿಸುವವರು ಉತ್ತರ ಕರ್ನಾಟಕದವರು ಎಂದು ತಿಳಿಸಿದರು.

ನಾಲ್ಕು ಕೋಟಿ ಜನ ಕಷ್ಟದಲ್ಲಿರುವಾಗ ಸರ್ಕಾರ ಇದೆ ಎಂದು ರೈತರಲ್ಲಿ ಆತ್ಮವಿಶ್ವಾಸ ತುಂಬಬೇಕಿತ್ತು. ಸಾಲಗಾರರ ರಕ್ಷಣೆಗೆ ಸರ್ಕಾರ ಬರಬೇಕಿತ್ತು. ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕ ಎಂದರೆ ಅಲರ್ಜಿ. ಅವರು ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾದಾಗಿನಿಂದ ನೀರಾವರಿ ಯೋಜನೆಗಳು ನಿಂತು ಹೋಗಿವೆ ಎಂದು ಟೀಕಿಸಿದರು.

ಮಲತಾಯಿ ಧೋರಣೆ ಬೇಡ
ಭೂಸ್ವಾಧೀನಕ್ಕೆ ಹಣ ಬೇಕು, ಪ್ರಕರಣ ನ್ಯಾಯಾಲಯದ ಮುಂದಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ವ್ಯಾಜ್ಯವನ್ನು ಸರ್ಕಾರ ನೋಡಿಕೊಳ್ಳಬೇಕು. ಕೃಷ್ಣ ನದಿಯಿಂದ ಕೋಲಾರಕ್ಕೆ ಸಹ ನೀರು ಕೊಡಬಹುದು ಎಂದು ಮುಖ್ಯಮಂತ್ರಿಗಳಿಗೆ ತಿಳಿದಿಲ್ಲ. ಭೀಮೆ, ಕೃಷ್ಣ ಮೇಲೆ ಅಕ್ರಮವಾಗಿ ಜಲಾಶಯ ನಿರ್ಮಿಸಿಕೊಂಡು ಮಹಾರಾಷ್ಟ್ರ ನೀರು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದ ಜಿಲ್ಲೆಗಳಿಗೆ ಬರಬೇಕಾದ ನೀರು ನಿಂತು ಹೋಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿಗಳು ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಕೊನೆಪಕ್ಷ ಮಾತಿನಲ್ಲಾದರೂ ಭರವಸೆ ನೀಡಬಹುದಿತ್ತು. ರಾಜ್ಯದ ರೈತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ಹಗುರ ಭಾಷಣಕ್ಕೆ ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಸಂಪುಟಕ್ಕೆ ಕೋಟಿ ಖರ್ಚು
ಸಚಿವ ಸಂಪುಟಕ್ಕೆ ಮುಖ್ಯಮಂತ್ರಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ರೈತರಿಗೆ ಮಾತ್ರ ಎರಡೂವರೆ ಸಾವಿರದ ಭಿಕ್ಷೆ ನೀಡುತ್ತಾರೆ. ರಾಜ್ಯದ ಜನರು ಕಷ್ಟದಲ್ಲಿರುವಾಗ ಸಚಿವರು ಮತ್ತು ಮುಖ್ಯಮಂತ್ರಿಗಳು ಸರ್ಕಾರಿ ಕಾರು ಏಕೆ ಬಳಸಬೇಕು ಎಂದು ಕೇಳಿದರು.

ಮಾತೆತ್ತಿದರೆ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸುತ್ತಾರೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಣ ಬರುತ್ತಿದೆ. ಬಜೆಟ್‍ನ ಕಂದಾಯ ವೆಚ್ಚದಲ್ಲಿ 10% ಹಣವನ್ನು ರೈತರಿಗೆ ನೀಡುವ ಒಂದು ಸಾಲಿನ ನಿರ್ಣಯವನ್ನು ಎಲ್ಲಾ ಶಾಸಕರು ಕೈಗೊಳ್ಳಬೇಕಿತ್ತು. ಆಗ ರೈತರಿಗೆ ಐವತ್ತು ಸಾವಿರ ಪರಿಹಾರ ಕೊಡಬಹುದಿತ್ತು. ಆದರೆ ಇದನ್ನು ಮಾಡಲಿಲ್ಲ. ರೈತರಿಗೆ ಸಹಾಯ ಮಾಡುವ ಯೋಗ್ಯತೆಯೇ ಇಲ್ಲ ಎಂದರು.

ಕೇಂದ್ರ ಸರ್ಕಾರ ಪ್ರತಿ ವರ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹತ್ತು ಸಾವಿರ ನೀಡುತ್ತಿದೆ. ಹಿಂದೆ ಯಡಿಯೂರಪ್ಪ ಅವರು ಸಿಎಂ ಇದ್ದಾಗ ಪ್ರವಾಹ ಬಂದಿತ್ತು. ಆಗ ರಾಜಸ್ವ ಖಾತೆಯಿಂದ ಹಣ ನೀಡಿದ್ದರು. ನೀರಾವರಿಗೆ, ತೋಟಗಾರಿಕೆ ಬೆಳೆಗಳಿಗೆ ಸಹ ಹಣ ನೀಡಿದ್ದರು. ರೈತರಿಗೆ ಈ ಸರ್ಕಾರ ಒಂದು ಪೈಸೆ ನೀಡುವ ಯೋಗ್ಯತೆ ಇಲ್ಲದ ಮೇಲೆ ಕೇಂದ್ರ ಸರ್ಕಾರವೂ ಸಹ ಹಣ ನೀಡಬಾರದು. ಕೇಂದ್ರ ಸರ್ಕಾರ ಹಣ ನೀಡಿದರೂ ಕೂಡ ಅದರಲ್ಲೂ ಕಡಿತ ಮಾಡುವ ಸಾಧ್ಯತೆ ಇದೆ ಎಂದರು.


Spread the love

About Laxminews 24x7

Check Also

ಮುಂದಿನ ಬಾರಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ಕೊಡ್ಬೇಡಿ – ಸ್ವಪಕ್ಷೀಯರಿಂದಲೇ ಕೆಪಿಸಿಸಿ ಅಧ್ಯಕ್ಷರಿಗೆ ದೂರು

Spread the loveಚಿಕ್ಕಬಳ್ಳಾಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್‌ನ ಕೆಲ ಮುಖಂಡರು ಕೆಪಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ