ಬೆಂಗಳೂರು: ಚೌಡೇಶ್ವರಿ ದೇವಿಗೆ ಪೂಜೆ ಮಾಡುವ ನೆಪದಲ್ಲಿ ನಕಲಿ ಜ್ಯೋತಿಷಿ ಮಹಿಳೆಯೊಬ್ಬರಿಂದ ಬರೋಬ್ಬರಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬ್ಯಾಟರಾಯನಪುರ ನಿವಾಸಿ 62 ವರ್ಷದ ಶಾಂತಮ್ಮ ವಂಚನೆಗೊಳಗಾದ ಮಹಿಳೆ. ವಿಕ್ಟೋರಿಯಾ ಆಸ್ಪತ್ರೆಯ ಫುಟ್ಪಾತ್ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್ ವಂಚಿಸಿದ ಖತರ್ನಾಕ್ ಜ್ಯೋತಿಷಿ. ಆರೋಗ್ಯ ಸಮಸ್ಯೆ ಹಿನ್ನೆಲೆ ಶಾಂತಮ್ಮ ಆಗಾಗ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುತ್ತಿದ್ದರು. ಇದೇ ವೇಳೆ ಜ್ಯೋತಿಷಿ ವೆಂಕಟೇಶ್ನನ್ನು ಭೇಟಿಯಾಗಿದ್ದರು. ತಮ್ಮ ಆರೋಗ್ಯದ ಬಗ್ಗೆ ಭವಿಷ್ಯ ಕೇಳಿದ್ದಾಗ, ಕೆಲವೇ ದಿನಗಳಲ್ಲಿ ಆರೋಗ್ಯ ಸುಧಾರಿಸಲಿದೆ ಎಂದು ವೆಂಕಟೇಶ್ ಹೇಳಿದ್ದ ಎನ್ನಲಾಗಿದೆ. ಬಳಿಕ ಶಾಂತಮ್ಮ ಅವರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಇದರಿಂದ ಜ್ಯೋತಿಷಿಯ ಮಾತಿನ ಮೇಲೆ ಶಾಂತಮ್ಮ ಅವರಿಗೆ ನಂಬಿಕೆ ಹೆಚ್ಚಾಗಿತ್ತು. ನಂತರ ಮಗನ ಕುಡಿತದ ಚಟ ಹಾಗೂ ಮಗಳ ಮದುವೆ ವಿಚಾರವಾಗಿ ಭವಿಷ್ಯ ಕೇಳಲು ಮತ್ತೆ ಜ್ಯೋತಿಷಿಯನ್ನು ಹುಡುಕಿಕೊಂಡು ಬಂದಿದ್ದರು.
ಆದರೆ ಆ ವೇಳೆ ವೆಂಕಟೇಶ್ ಸಿಗದ ಹಿನ್ನೆಲೆಯಲ್ಲಿ, ಶಾಂತಮ್ಮ ಆಟೋ ಚಾಲಕನೊಬ್ಬನ ಬಳಿ ತಮ್ಮ ಮೊಬೈಲ್ ನಂಬರ್ ನೀಡಿ ಹೋಗಿದ್ದರು. ಬಳಿಕ ಆ ನಂಬರ್ ಪಡೆದುಕೊಂಡ ಜ್ಯೋತಿಷಿ, ಶಾಂತಮ್ಮ ಅವರಿಗೆ ಕರೆ ಮಾಡಿದ್ದ. ನಂತರ ಬ್ಯಾಟರಾಯನಪುರದಲ್ಲಿರುವ ಶಾಂತಮ್ಮ ಅವರ ಮನೆಗೆ ಬಂದಿದ್ದ ವೆಂಕಟೇಶ್, ನಿಂಬೆಹಣ್ಣು ನೀಡಿ ಚೌಡೇಶ್ವರಿ ದೇವಿಗೆ ಪೂಜೆ ಮಾಡಬೇಕು ಎಂದು ಹೇಳಿದ್ದಾನೆ. ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದಾನೆ. ಅಲ್ಲದೇ ಪ್ರತಿ ಅಮಾವಾಸ್ಯೆ ದಿನ ಬಂದು ಒಡವೆಗಳನ್ನು ಪಡೆದು ಪೂಜೆ ಮಾಡುವುದಾಗಿ ಹೇಳಿದ್ದ. ಜ್ಯೋತಿಷಿಯ ಮಾತನ್ನು ನಂಬಿದ ಶಾಂತಮ್ಮ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಆತನಿಗೆ ನೀಡುತ್ತಿದ್ದರು. ಹೀಗೆ ಸುಮಾರು ಒಂದು ವರ್ಷದಿಂದ ಹಂತ ಹಂತವಾಗಿ 40 ಲಕ್ಷ ರೂ. ಮೌಲ್ಯದ ಒಡವೆಗಳನ್ನು ಪಡೆದುಕೊಂಡಿದ್ದಾನೆ.
ಕಳೆದ ಆಗಸ್ಟ್ 19ರಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ತಮ್ಮ ಒಡವೆಗಳನ್ನು ವಾಪಸ್ ನೀಡುವಂತೆ ಶಾಂತಮ್ಮ ಜ್ಯೋತಿಷಿಯನ್ನು ಕೇಳಿದ್ದಾರೆ. ಒಡವೆಗಳನ್ನು ವಾಪಸ್ ಕೇಳಿದ ದಿನವೇ ವೆಂಕಟೇಶ್ ಹೊಸ ಕಥೆ ಕಟ್ಟಿದ್ದಾನೆ. ತನಗೆ ಅಪಘಾತವಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂಬಂತೆ ಶಾಂತಮ್ಮ ಅವರನ್ನು ನಂಬಿಸಲು ಯತ್ನಿಸಿದ್ದಾನೆ. ಇದಕ್ಕಾಗಿ ಅಪಘಾತ ಸಂಭವಿಸಿರುವಂತೆ ಕಾಣುವ ಎಐ ವೀಡಿಯೋವೊಂದನ್ನು ಶಾಂತಮ್ಮ ಅವರಿಗೆ ಕಳುಹಿಸಿದ್ದಾನೆ. ಬಳಿಕ ತಾನು ಬದುಕುಳಿಯುವುದೇ ಅನುಮಾನ ಎಂಬ ರೀತಿಯಲ್ಲಿ ಹೇಳಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಜ್ಯೋತಿಷಿಯ ಮಾತಿನಿಂದ ಆತಂಕಗೊಂಡ ಶಾಂತಮ್ಮ ಈ ವಿಚಾರವನ್ನು ತಮ್ಮ ಮಗಳ ಬಳಿ ಹೇಳಿಕೊಂಡಿದ್ದಾರೆ. ಬಳಿಕ ವೀಡಿಯೋವನ್ನು ಪರಿಶೀಲಿಸಿದಾಗ ಅದು ನಿಜವಾದ ಅಪಘಾತದ ದೃಶ್ಯವಲ್ಲ, ಎಐ ಮೂಲಕ ಸೃಷ್ಟಿಸಿರುವ ವಿಡಿಯೋ ಎಂಬುದು ಗೊತ್ತಾಗಿದೆ. ನಂತರ ವೆಂಕಟೇಶ್ಗೆ ಕರೆ ಮಾಡಲು ಪ್ರಯತ್ನಿಸಿದರೂ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಇದರಿಂದ ಅನುಮಾನಗೊಂಡ ಶಾಂತಮ್ಮ, ತಾವು ವಂಚನೆಗೊಳಗಾಗಿರುವ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವೆಂಕಟೇಶ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Laxmi News 24×7