ಲಕ್ನೋ: ರೀಲ್ಸ್ ಹುಚ್ಚಿಗಾಗಿ ವ್ಯಕ್ತಿಯೊಬ್ಬ 30 ಅಡಿ ಎತ್ತರದಿಂದ ಡ್ಯಾಂಗೆ ಜಿಗಿದ ಪರಿಣಾಮ ಎರಡೂ ಕಾಲುಗಳ ಮೂಳೆ ಮುರಿತಕ್ಕೊಳಗಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಝಾನ್ಸಿಯ ಪಹುಜ್ ಡ್ಯಾಂನಲ್ಲಿ ಭಾನುವಾರ ಘಟನೆ ನಡೆದಿದೆ. ಪುಷ್ಪೇಂದ್ರ ಎಂಬ 38 ವರ್ಷದ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ರೀಲ್ಸ್ ಶೂಟ್ ಮಾಡಲು ಡ್ಯಾಂಗೆ ತೆರಳಿದ್ದ. ವಿಭಿನ್ನ ಹಾಗೂ ಸಾಹಸಮಯ ದೃಶ್ಯ ಸೆರೆಹಿಡಿಯುವ ಉದ್ದೇಶದಿಂದ ಪುಷ್ಪೇಂದ್ರ ಡ್ಯಾಂನ ವೀಕ್ಷಣಾ ಸ್ಥಳದ ರೈಲಿಂಗ್ ದಾಟಿ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಜಿಗಿದಿದ್ದಾನೆ.
ನೀರಿನ ಆಳವನ್ನು ಸರಿಯಾಗಿ ಅಂದಾಜಿಸಲು ವಿಫಲರಾದ ಕಾರಣ ಆಳವಾದ ನೀರಿಗೆ ಬೀಳುವ ಬದಲು ಕೆಳಗಿದ್ದ ಬಂಡೆಗಳ ಮೇಲೆ ಬಿದ್ದ ಪರಿಣಾಮ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಮೂಳೆಗಳು ಮುರಿದಿವೆ. ಗಾಯದ ತೀವ್ರತೆಯಿಂದಾಗಿ ಪುಷ್ಪೇಂದ್ರಗೆ ನೀರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಎರಡೂ ಕಾಲುಗಳು ಗಾಯಗೊಂಡಿದ್ದರಿಂದ ನೀರಿನಲ್ಲಿ ಮುಳುಗುವ ಅಪಾಯಕ್ಕೆ ಸಿಲುಕಿದ್ದ. ಕೈಗಳ ಸಹಾಯದಿಂದ ಹೇಗೋ ನೀರಿನಲ್ಲಿ ತೇಲುತ್ತಾ ಸುರಕ್ಷಿತ ಸ್ಥಳ ತಲುಪಲು ಪ್ರಯತ್ನಿಸಿದ್ದಾನೆ.
ಈ ವೇಳೆ ಸ್ಥಳದಲ್ಲಿದ್ದ ಕೆಲವರು ಆತನ ಪರಿಸ್ಥಿತಿಯನ್ನು ಗಮನಿಸಿ ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಪುಷ್ಪೇಂದ್ರನನ್ನು ನೀರಿನಿಂದ ಹೊರಗೆಳೆದು ರಕ್ಷಿಸಿದ್ದಾರೆ. ಮಾಹಿತಿ ತಿಳಿದ ಬಳಿಕ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಗಾಯಾಳುವನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಎರಡೂ ಕಾಲುಗಳ ಮೂಳೆ ಮುರಿದಿರುವುದು ದೃಢಪಟ್ಟಿದೆ.
Laxmi News 24×7