Breaking News

ಕರ್ನಾಟಕದಲ್ಲಿ ಭತ್ತದ ಬಿತ್ತನೆಗೆ ಮುಂಗಾರು ಹೊಡೆತ – 4.28 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಇಳಿಕೆ

Spread the love

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ  ಆಗದ ಕಾರಣ ಭತ್ತದ ಬಿತ್ತನೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಕರ್ನಾಟಕದಲ್ಲಿ 4.28 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬಿತ್ತನೆ ಕಡಿಮೆಯಾಗಿದೆ.

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದ್ರೆ ಭತ್ತದ ಬಿತ್ತನೆ ಪ್ರಮಾಣದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಇಳಿಕೆ ಕಂಡುಬಂದಿದೆ.

ಇನ್ನೂ ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲೂ ಭತ್ತದ ಬಿತ್ತನೆ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 438.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದರೆ, ಈ ವರ್ಷ 421.82 ಲಕ್ಷ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಅಂದರೆ ದೇಶದಲ್ಲಿ ಒಟ್ಟಾರೆ 16.37 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬಿತ್ತನೆ ಕಡಿಮೆಯಾಗಿದ್ದು, ಶೇ. 3.71ರಷ್ಟು ಕುಸಿತ ಕಂಡುಬಂದಿದೆ.

ಕರ್ನಾಟಕದಲ್ಲಿ ಭತ್ತ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲೂ ಕೃಷಿ ಚಟುವಟಿಕೆಗಳು ಮಂದಗತಿಗೆ ತಲುಪಿವೆ. ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ಶಿವಮೊಗ್ಗ, ಮಂಡ್ಯ ಹಾಗೂ ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಭತ್ತದ ಕೃಷಿಗೆ ಹಿನ್ನಡೆಯಾಗಿದೆ.

ವಿಶೇಷವಾಗಿ ಜೂನ್‌ ಮತ್ತು ಜುಲೈ ತಿಂಗಳಲ್ಲಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಭತ್ತದ ಬಿತ್ತನೆ ಮೇಲೆ ನೇರ ಪರಿಣಾಮ ಬೀರಿದೆ. ನೀರಿನ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ಬಿತ್ತನೆ ಮುಂದೂಡುವ ಅಥವಾ ಇತರೆ ಬೆಳೆಗಳತ್ತ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತೆಲಂಗಾಣ, ಆಂಧ್ರದಲ್ಲೂ ಭತ್ತದ ಬಿತ್ತನೆ ಇಳಿಕೆ
ಕರ್ನಾಟಕದ ಬಳಿಕ ತೆಲಂಗಾಣದಲ್ಲಿ 3.61 ಲಕ್ಷ ಹೆಕ್ಟೇರ್‌, ಆಂಧ್ರಪ್ರದೇಶದಲ್ಲಿ 1.91 ಲಕ್ಷ ಹೆಕ್ಟೇರ್‌, ಉತ್ತರ ಪ್ರದೇಶದಲ್ಲಿ 1.84 ಲಕ್ಷ ಹೆಕ್ಟೇರ್‌ ಹಾಗೂ ಮಧ್ಯಪ್ರದೇಶದಲ್ಲಿ 1.75 ಲಕ್ಷ ಹೆಕ್ಟೇರ್‌ ಭತ್ತದ ಬಿತ್ತನೆ ಕಡಿಮೆಯಾಗಿದೆ.

ದ್ವಿದಳ ಧಾನ್ಯಗಳಲ್ಲೂ ಕರ್ನಾಟಕಕ್ಕೆ ಹಿನ್ನಡೆ
ಇನ್ನೂ ಭತ್ತದ ಜೊತೆಗೆ ದ್ವಿದಳ ಧಾನ್ಯಗಳ ಬಿತ್ತನೆಯಲ್ಲೂ ಕರ್ನಾಟಕ ಹಿನ್ನಡೆ ಕಂಡಿದೆ. ದೇಶದಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಕಳೆದ ವರ್ಷ ದೇಶದಲ್ಲಿ 115.30 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಿತ್ತನೆಯಾಗಿದ್ದರೆ, ಈ ವರ್ಷ ಅದು 117.13 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಒಟ್ಟಾರೆ 1.84 ಲಕ್ಷ ಹೆಕ್ಟೇರ್‌ ಹೆಚ್ಚಳ ದಾಖಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ 2.07 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಕಡಿಮೆಯಾಗಿದೆ.

ಮಹಾರಾಷ್ಟ್ರದಲ್ಲಿ 2.60 ಲಕ್ಷ ಹೆಕ್ಟೇರ್‌ ಹಾಗೂ ಒಡಿಶಾದಲ್ಲಿ 0.61 ಲಕ್ಷ ಹೆಕ್ಟೇರ್‌ ಇಳಿಕೆ ಕಂಡುಬಂದಿದೆ. ಇದಕ್ಕೆ ವಿರುದ್ಧವಾಗಿ ಉತ್ತರ ಪ್ರದೇಶದಲ್ಲಿ 3.97 ಲಕ್ಷ ಹೆಕ್ಟೇರ್‌, ಜಾರ್ಖಂಡ್‌ನಲ್ಲಿ 0.98 ಲಕ್ಷ, ತೆಲಂಗಾಣದಲ್ಲಿ 0.90 ಲಕ್ಷ, ರಾಜಸ್ಥಾನದಲ್ಲಿ 0.57 ಲಕ್ಷ ಹಾಗೂ ಮಧ್ಯಪ್ರದೇಶದಲ್ಲಿ 0.38 ಲಕ್ಷ ಹೆಕ್ಟೇರ್‌ ದ್ವಿದಳ ಧಾನ್ಯಗಳ ಬಿತ್ತನೆ ಹೆಚ್ಚಾಗಿದೆ.

ಒಟ್ಟಾರೆ, ಮುಂಗಾರು ಮಳೆಯ ಕೊರತೆ ಕರ್ನಾಟಕದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಪ್ರಮುಖ ಆಹಾರ ಬೆಳೆಗಳಾದ ಭತ್ತ ಮತ್ತು ದ್ವಿದಳ ಧಾನ್ಯಗಳ ಬಿತ್ತನೆ ಕುಸಿತ ರೈತರ ಆತಂಕಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ಅಂಗನವಾಡಿ ಕಾರ್ಯಕರ್ತೆಯರ ವೇತನ 4,000 ರೂ. ಹೆಚ್ಚಳ – 5 ಲಕ್ಷದವರೆಗೆ ಆರೋಗ್ಯ ಸೇವೆ; ಸಿಎಂ ಯೋಗಿ ಬಂಪರ್‌ ಗಿಫ್ಟ್‌!

Spread the loveಅಯೋಧ್ಯೆ: ಉತ್ತರ ಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಬಂಪರ್‌ ಗಿಫ್ಟ್‌ ಕೊಟ್ಟಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ