Breaking News

ಶಿಕ್ಷಕರಿಗೂ ಪ್ರತಿಭಾ ಕಾರಂಜಿ, ಕ್ರೀಡಾಕೂಟ: ಮುಂದಿನ ವರ್ಷ ಮೂರು ದಿನ ಶಿಕ್ಷಕರ ಹಬ್ಬ – ಲಕ್ಷ್ಮೀ ಹೆಬ್ಬಾಳಕರ್

Spread the love

ಬೆಳಗಾವಿ: ಶಿಕ್ಷಕರ ದಿನಾಚರಣೆಯನ್ನು ಮುಂದಿನ ವರ್ಷದಿಂದ ಮೂರು ದಿನಗಳ ವಿಶೇಷ ಕಾರ್ಯಕ್ರಮವಾಗಿ ಆಯೋಜಿಸಿ, ಶಿಕ್ಷಕರ ಪ್ರತಿಭೆ ಹಾಗೂ ಕ್ರೀಡಾಸಕ್ತಿಗೆ ವೇದಿಕೆ ಕಲ್ಪಿಸಲಾಗುವುದು ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಘೋಷಿಸಿದರು.

ಬೆಳಗಾವಿಯ ಗಾಂಧಿ ಭವನದಲ್ಲಿ ನಡೆದ, ಗ್ರಾಮೀಣ ಕ್ಷೇತ್ರದ ಶಿಕ್ಷಕರ ದಿನಾಚರಣೆ, ಪ್ರತಿಭಾ ಕಾರಂಜಿ, ಕಲೋತ್ಸವ ಹಾಗೂ ಕ್ರೀಡಾಕೂಟಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರತಿವರ್ಷ ಶಿಕ್ಷಕರು ಮಕ್ಕಳಿಗಾಗಿ ಪ್ರತಿಭಾ ಕಾರಂಜಿ, ಕಲೋತ್ಸವ ಹಾಗೂ ಕ್ರೀಡಾಕೂಟಗಳನ್ನು ಆಯೋಜಿಸುತ್ತಾರೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಹೊರತರುವ ಕೆಲಸ ಮಾಡುತ್ತಾರೆ. ಇದೇ ರೀತಿಯಲ್ಲಿ ಶಿಕ್ಷಕರ ಪ್ರತಿಭೆಗೂ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದರು.
ಮುಂದಿನ ವರ್ಷದಿಂದ ಬೆಳಗಾವಿ ತಾಲೂಕು ಮಟ್ಟದಲ್ಲಿ ಶಿಕ್ಷಕರಿಗಾಗಿ ಮೂರು ದಿನಗಳ ವಿಶೇಷ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ತಮ್ಮ ಅಧ್ಯಕ್ಷತೆಯಲ್ಲಿ ಆಯೋಜಿಸುವುದಾಗಿ ಅವರು ಘೋಷಿಸಿದರು.
ಮೂರು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನ ಸಂಪೂರ್ಣವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಿಡಲಾಗುವುದು. ಶಿಕ್ಷಕರಿಗಾಗಿ ನೃತ್ಯ, ಗಾಯನ, ರಂಗೋಲಿ, ನಾಟಕ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಎರಡನೇ ದಿನ ಕ್ರೀಡಾಕೂಟಕ್ಕೆ ಮೀಸಲಿದ್ದು, ಕಬಡ್ಡಿ, ಕ್ರಿಕೆಟ್, ಖೋಖೋ, 100 ಮೀಟರ್ ಓಟ, ಹೈಜಂಪ್, ಲೆಮನ್ ಅಂಡ್ ಸ್ಪೂನ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುವುದು. ಮೂರನೇ ದಿನ ಸಭಾ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳ ವಿಜೇತ ಶಿಕ್ಷಕರಿಗೆ ಬಹುಮಾನ ಮತ್ತು ಸನ್ಮಾನ ನೆರವೇರಿಸಲಾಗುವುದು ಎಂದು ತಿಳಿಸಿದರು.
“ಮಕ್ಕಳಿಗಾಗಿ ನೀವು ಪ್ರತಿಭಾ ಕಾರಂಜಿ, ಕಲೋತ್ಸವ ಮತ್ತು ಕ್ರೀಡಾಕೂಟಗಳನ್ನು ಮಾಡುತ್ತೀರಿ. ಆದರೆ ಶಿಕ್ಷಕರ ಪ್ರತಿಭೆಯನ್ನು ಹೊರತರುವ ಕಾರ್ಯಕ್ರಮವೂ ಇರಬೇಕು. ಶಿಕ್ಷಕರಿಗೆ ಒಂದು ದಿನದ ಕಾರ್ಯಕ್ರಮವಲ್ಲ, ಮೂರು ದಿನಗಳ ಸಂಭ್ರಮವನ್ನು ಆಯೋಜಿಸಬೇಕು ಎಂಬ ಆಲೋಚನೆ ನನಗೆ ಬಂದಿದೆ. ನಿಮ್ಮ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಮುಂದಿನ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತೇನೆ,” ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಶಿಕ್ಷಕರು ಕೇವಲ ಪಠ್ಯ ಬೋಧನೆ ಮಾಡುವವರಲ್ಲ; ಅವರು ಭವಿಷ್ಯದ ಪೀಳಿಗೆಯನ್ನು ರೂಪಿಸುವ ರಾಷ್ಟ್ರ ನಿರ್ಮಾತೃಗಳು ಎಂದು ಬಣ್ಣಿಸಿದ ಅವರು, ಒಬ್ಬ ವೈದ್ಯ, ಇಂಜಿನಿಯರ್, ವಿಜ್ಞಾನಿ, ಅಧಿಕಾರಿ, ರಾಜಕಾರಣಿ ಅಥವಾ ಯಾವುದೇ ಕ್ಷೇತ್ರದ ಸಾಧಕನ ಹಿಂದೆ ಶಿಕ್ಷಕರ ಮಾರ್ಗದರ್ಶನ ಮತ್ತು ಪರಿಶ್ರಮ ಇರುತ್ತದೆ ಎಂದರು.
ತಾವೂ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದು, ಕನ್ನಡ ಶಾಲೆಯಲ್ಲಿ ಓದಿರುವ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ ಹೆಬ್ಬಾಳಕರ್, “ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಜೀವನವನ್ನು ಹೇಗೆ ಎದುರಿಸಬೇಕು, ಯಶಸ್ಸನ್ನು ಹೇಗೆ ಸಾಧಿಸಬೇಕು ಎಂಬುದನ್ನೂ ಕಲಿಸುತ್ತಾರೆ. ಶಿಕ್ಷಕರ ಸೇವೆಗೆ ಎಷ್ಟು ಗೌರವ ಸಲ್ಲಿಸಿದರೂ ಸಾಲದು” ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಲು ತಡವಾದ ಬಗ್ಗೆ ಶಿಕ್ಷಕರಲ್ಲಿ ಕ್ಷಮೆಯಾಚಿಸಿದ ಅವರು, ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳಿದ್ದ ಕಾರಣ ತಡವಾಯಿತು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ​ವೃಷಭೇಂದ್ರಯ್ಯ ಜೆ. ಡಿ, ಬಸವರಾಜ ರಾಯವ್ವಗೋಳ, ಜಂಗಲಿ ಸಾಬ್ ನಾಯಕ, ಜಯಕುಮಾರ್ ಹೆಬ್ಳಿ, ಆರ್. ಕೆ. ಆಂಜನೇಯ, ಯು.ಡಿ. ಹುನಕುಪ್ಪಿ, ಪುಂಡಲೀಕ್ ಚವ್ಹಾಣ, ಅನ್ವರ್ ಲಂಗೋಟಿ, ರಮೇಶ ಗೋಣಿ, ಆನಂದ ಕಾದ್ರೊಳ್ಳಿ, ಅಶೋಕ ಖೋತ, ಚಂದ್ರು ಕೋಲಕಾರ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮಹದೇವಪ್ಪಣ್ಣ ನನಗೆ ತಂದೆ ಸಮಾನ, ಅವರೇ ಆ ಮನೆಯಲ್ಲಿರಲಿ: ಬೈರತಿ ಸುರೇಶ್

Spread the loveಬೆಂಗಳೂರು: ನಮ್ಮ ನಡುವೆ ಯಾವುದೇ ಮನೆ ಗಲಾಟೆ ಇಲ್ಲ. ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ