ಚಿಕ್ಕಬಳ್ಳಾಪುರ: ಮನೆಯಿಂದಲೇ ಕೆಲಸ ಮಾಡಿ ಉತ್ತಮ ಆದಾಯ ಗಳಿಸಬಹುದು ಎಂದು ಜನರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಹಣವನ್ನು ಠೇವಣಿಯಾಗಿ ಪಡೆದು ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ‘ವರ್ಕ್ ಫ್ರಂ ಹೋಮ್’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತು ಹಾಗೂ ರೀಲ್ಸ್‌ಗಳನ್ನು ಹರಿಬಿಟ್ಟು ಸಾವಿರಾರು ಜನರನ್ನು ಸೆಳೆಯುತ್ತಿದ್ದ ಆರೋಪಿಗಳಿಂದ ಭಾರೀ ಪ್ರಮಾಣದ ವಂಚನೆ ನಡೆದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರನ್ನು ಕಿರಣ್ ಮತ್ತು ಅವರ ಪತ್ನಿ ಆರತಿ ಎಂದು ಗುರುತಿಸಲಾಗಿದೆ. ದೇವನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿಗಳು ‘ಕಾಳಿಕಾ ದೇವಿ ಎಂಟರ್‌ಪ್ರೈಸಸ್’ ಎಂಬ ಹೆಸರಿನಲ್ಲಿ ವರ್ಕ್ ಫ್ರಂ ಹೋಮ್ ಉದ್ಯೋಗದ ಆಮಿಷವೊಡ್ಡುತ್ತಿದ್ದರು ಎನ್ನಲಾಗಿದೆ. ವಿಶೇಷವಾಗಿ ಮೇಣದ ಬತ್ತಿ, ಡ್ರೈ ಫ್ರೂಟ್ಸ್, ಅಗರಬತ್ತಿ ಸೇರಿದಂತೆ ವಿವಿಧ ವಸ್ತುಗಳ ಪ್ಯಾಕಿಂಗ್ ಕೆಲಸವನ್ನು ಮನೆಯಲ್ಲಿಯೇ ಮಾಡಬಹುದು. ಇದರಿಂದ ಪ್ರತಿ ತಿಂಗಳು ಉತ್ತಮ ಆದಾಯ ಗಳಿಸಬಹುದು ಎಂದು ಜನರನ್ನು ನಂಬಿಸುತ್ತಿದ್ದರು ಎನ್ನಲಾಗಿದೆ.
ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವರ್ಕ್ ಫ್ರಂ ಹೋಮ್ ಕೆಲಸದ ಕುರಿತು ರೀಲ್ಸ್ ಹಾಗೂ ಜಾಹೀರಾತುಗಳನ್ನು ಪ್ರಕಟಿಸಿ ನಿರುದ್ಯೋಗಿಗಳು, ಗೃಹಿಣಿಯರು ಸೇರಿದಂತೆ ಹಲವರನ್ನು ಸಂಪರ್ಕಿಸುತ್ತಿದ್ದರು. ಕೆಲಸ ಪಡೆಯಲು ಮೊದಲು ಹಣವನ್ನು ಡೆಪಾಸಿಟ್ ಮಾಡಬೇಕು ಎಂದು ಹೇಳಿ, ವ್ಯಕ್ತಿಯೊಬ್ಬರಿಂದ ಸುಮಾರು ₹2 ಲಕ್ಷದಿಂದ ₹20 ಲಕ್ಷದವರೆಗೆ ಹಣ ಪಡೆದುಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಆರೋಪಿಗಳ ಮಾತನ್ನು ನಂಬಿದ ಕೆಲವರು ಸಾಲ ಮಾಡಿಕೊಂಡು, ಸ್ನೇಹಿತರು ಹಾಗೂ ಸಂಬಂಧಿಕರಿಂದ ಹಣ ಪಡೆದು ಆರೋಪಿಗಳಿಗೆ ಠೇವಣಿ ಮಾಡಿದ್ದರು ಎನ್ನಲಾಗಿದೆ. ಒಂದು ತಿಂಗಳಿಗೆ ₹1 ಲಕ್ಷ ಹಣವನ್ನು ಡೆಪಾಸಿಟ್ ಮಾಡಿದರೆ, ಪ್ಯಾಕಿಂಗ್ ಕೆಲಸದ ಮೂಲಕ ಸುಮಾರು ₹23 ಸಾವಿರದಷ್ಟು ಹಣವನ್ನು ಆದಾಯವಾಗಿ ನೀಡುವುದಾಗಿ ಭರವಸೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಆರಂಭದಲ್ಲಿ ಕೆಲವರಿಗೆ ಹಣ ನೀಡುವ ಮೂಲಕ ನಂಬಿಕೆ ಮೂಡಿಸಿ, ಬಳಿಕ ಹೆಚ್ಚಿನ ಮೊತ್ತದ ಹಣವನ್ನು ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಹೆಚ್ಚಿನ ಹಣವನ್ನು ಠೇವಣಿ ಮಾಡಿದ ನಂತರ ಕೆಲಸ ನೀಡದೇ, ಹಣವನ್ನು ಹಿಂದಿರುಗಿಸದೇ ಆರೋಪಿಗಳು ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದರು ಎಂದು ವಂಚನೆಗೊಳಗಾದವರು ಆರೋಪಿಸಿದ್ದಾರೆ.
ಈ ರೀತಿಯಾಗಿ ಸಾವಿರಾರು ಜನರಿಗೆ ವರ್ಕ್ ಫ್ರಂ ಹೋಮ್ ಉದ್ಯೋಗದ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ವ್ಯಾಪ್ತಿ ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ.
ದಂಪತಿಯ ವಿರುದ್ಧ ದೂರುಗಳು ದಾಖಲಾಗಿದ್ದು, ಪೊಲೀಸರು ಹಣದ ವಹಿವಾಟು, ಬ್ಯಾಂಕ್ ಖಾತೆಗಳು, ಸಾಮಾಜಿಕ ಜಾಲತಾಣಗಳ ಮೂಲಕ ನಡೆದ ಸಂಪರ್ಕ, ವಂಚನೆಗೊಳಗಾದವರ ಸಂಖ್ಯೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಇನ್ನೂ ಎಷ್ಟು ಮಂದಿಗೆ ವಂಚನೆ ಮಾಡಿದ್ದಾರೆ ಹಾಗೂ ಒಟ್ಟು ಎಷ್ಟು ಹಣ ಸಂಗ್ರಹಿಸಿದ್ದಾರೆ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯದ ಭರವಸೆ ನೀಡುವ ಜಾಹೀರಾತುಗಳಿಗೆ ಸಾರ್ವಜನಿಕರು ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕು. ಉದ್ಯೋಗ ನೀಡುವುದಾಗಿ ಹೇಳಿ ಮುಂಗಡ ಹಣ, ಡೆಪಾಸಿಟ್ ಅಥವಾ ಭದ್ರತಾ ಠೇವಣಿ ಕೇಳುವವರ ಬಗ್ಗೆ ಪರಿಶೀಲನೆ ನಡೆಸದೆ ಹಣ ಪಾವತಿಸದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
Laxmi News 24×7