ಧಾರವಾಡ: ಪ್ರತಿ ವರ್ಷ ನಮ್ಮ ದೇಶದಲ್ಲಿ ಸುಮಾರು 50 ಲಕ್ಷ ಬಲವಂತದ ಗರ್ಭಪಾತ ಘಟನೆಗಳು ನಡೆಯುತ್ತಿದ್ದು, ಜನರಿಗೆ ಲೈಂಗಿಕ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಎಂದು ಹಿರಿಯ ಮಹಿಳಾ ಆರೋಗ್ಯ ತಜ್ಞ ಡಾ. ಸಂಜೀವ ಕುಲಕರ್ಣಿ ಹೇಳಿದರು.
ಅವರು ಪಂ. ಬಸವರಾಜಶಾಸ್ತ್ರೀ ಕೊಂಡಿಕೊಪ್ಪಮಠ ಸ್ಮರಣಾರ್ಥ ದತ್ತಿ ನಿಮಿತ್ತ ಈಚೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿ, ಭಾರತೀಯ ವೈದ್ಯಕೀಯ ಸಂಘ ಗೋಕಾಕ ಶಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ `ಜೀವ ಜಗತ್ತಿನಲ್ಲಿ ಸಂತಾನೋತ್ಪತ್ತಿಯ ವಿಚಿತ್ರಗಳು’ ವಿಷಯದ ಉಪನ್ಯಾಸ ನೀಡಿದರು.
ಲೈಂಗಿಕ ಜ್ಞಾನದ ಕೊರತೆಯಿಂದಾಗಿ ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗದಲ್ಲಿಯೂ ಗರ್ಭಪಾತ ಘಟನೆಗಳು ಹೆಚ್ಚಾಗುತ್ತಿವೆ. ಈಗಲೂ ಲೈಂಗಿಕ ಶಿಕ್ಷಣ ನೀಡಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಜನರಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಕುರಿತು ವೈಜ್ಞಾನಿಕ ತಳಹದಿಯ ಶಿಕ್ಷಣ ನೀಡುವುದು ಅಗತ್ಯ ಎಂದರು.
350 ಕೋಟಿ ವರ್ಷಗಳ ಹಿಂದೆ ಜೀವಿಗಳ ಸೃಷ್ಟಿಯಾಯಿತು. ಜೀವ ಜಗತ್ತಿನಲ್ಲಿ ಸಂತಾನೋತ್ಪತ್ತಿಯ ವಿಚಿತ್ರಗಳು ನಡೆಯುತ್ತಿವೆ. ಪ್ರಕೃತಿಯಲ್ಲಿ ಮನುಷ್ಯರನ್ನು ಹೊರತುಪಡಿಸಿದರೆ ಹೆಣ್ಣು ಬಹುಸಂಗಾತಿ ಜೀವಿ. ಪ್ರಕೃತಿಯಲ್ಲಿ ವೈವಿಧ್ಯವಿದೆ. ಉಳಿಯಬೇಕು, ಬೆಳೆಯಬೇಕು, ಬಾಳಬೇಕು ಹಾಗೂ ಬೆಳೆಸಬೇಕು ಎಂಬುದು ಎಲ್ಲ ಜೀವಿಗಳ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಅವು ಸಂತಾನೋತ್ಪತ್ತಿ ಮಾಡುತ್ತವೆ ಎಂದು ನುಡಿದರು.
ಡಾ. ಜಗದೀಶ ನಿರಡಿ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿ.ಆರ್. ಯರವಿನತೆಲಿಮಠ ವೇದಿಕೆಯಲಿದ್ದರು. ಡಾ. ವಿಶ್ವನಾಥ ಶಿಂಧೋಳಿಮಠ ಸ್ವಾಗತಿಸಿದರು. ಡಾ. ಜ್ಯೋತಿ ಘೋಂಗಡೆಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಉಮಾ ಚಿಕ್ಕರಡ್ಡಿ ನಿರೂಪಿಸಿದರು.
Laxmi News 24×7