ಪಾಟ್ನಾ: ಬಿಹಾರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಿನ್ನೆ ನಡೆದ NEET UG ಮರುಪರೀಕ್ಷೆ ವೇಳೆ 9 ನಕಲಿ ಅಭ್ಯರ್ಥಿಗಳು ಹಾಗೂ ಅವರೊಂದಿಗಿದ್ದ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಲಖಿಸರಾಯ್ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದೆ. ಪರೀಕ್ಷಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ 9 ನಕಲಿ ಅಭ್ಯರ್ಥಿಗಳು ಸೇರಿ 30 ಜನರನ್ನು ಪತ್ತೆಹಚ್ಚಿದೆ.
ಮೂಲಗಳ ಪ್ರಕಾರ, ಲಖಿಸರಾಯ್ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಸಿದ ತಪಾಸಣೆ ವೇಳೆ 30 ಜನ ಸಿಕ್ಕಿಬಿದ್ದಿದ್ದಾರೆ. ಈ ಪೈಕಿ 9 ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದರೆ, ಇನ್ನುಳಿದ 21 ಜನರು ಈ ಪರೀಕ್ಷಾ ವಂಚನೆ ಜಾಲಕ್ಕೆ ಸಹಾಯ ಮತ್ತು ಅಕ್ರಮದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಅಧಿಕಾರಿಗಳು ಈ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸರ ವಿಶೇಷ ತಂಡ ಈ ದಂಧೆಯ ಹಿಂದಿರುವ ಕಿಂಗ್‌ಪಿನ್‌ಗಳ ಪತ್ತೆಗಾಗಿ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದೆ.
ಈ ಜಾಲದಲ್ಲಿ ಇನ್ನೂ ಹಲವು ಪ್ರಭಾವಿಗಳು ಭಾಗಿಯಾಗಿರುವ ಶಂಕೆಯಿದ್ದು, ತನಿಖೆ ಪೂರ್ಣಗೊಂಡ ಬಳಿಕ ಇಡೀ ವಂಚನೆ ಜಾಲದ ಬಗ್ಗೆ ಬಹಿರಂಗಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7