ಬೆಳಗಾವಿ: ತಂಬಾಕು ಬಳಕೆ ಕೇವಲ ಶ್ವಾಸಕೋಶ ಕ್ಯಾನ್ಸರ್‌ಗೆ ಮಾತ್ರ ಕಾರಣವಾಗುವುದಿಲ್ಲ. ಅದು ಮಾನವ ದೇಹದ ಪ್ರತಿಯೊಂದು ಅಂಗವನ್ನೂ ವಿಭಿನ್ನ ರೀತಿಯಲ್ಲಿ ಹಾನಿಗೊಳಿಸುತ್ತದೆ. ಹೃದಯ, ಯಕೃತ್, ಮೆದುಳು ಸೇರಿದಂತೆ ಎಲ್ಲಾ ಅಂಗಾಂಗಗಳ ಮೇಲೂ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ತಂಬಾಕು ಸೇವನೆ ಜೀವನದ ಮೇಲೆ ದುಷ್ಪರಿಣಾಮ ಬೀರಬಲ್ಲದು ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರಿಂದಿಲ್ಲಿ ಹೇಳಿದರು.
ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಿ. 30 ಮೇ 2026ರಂದು ಏರ್ಪಡಿಸಿದ್ದ ಜಾಗೃತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯಕ್ಕೆ ಹಾನಿ ಮಾಡುವ ತಂಬಾಕು ಬಳಕೆ ಧೂಮಪಾನವನ್ನು ವಿಶ್ವದ ಅನೇಕ ದೇಶಗಳಲ್ಲಿ ಕಡಿಮೆಯಾಗುತ್ತಿದೆ. ವಿಶೇಷವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕಠಿಣ ಕಾನೂನುಗಳು ಮತ್ತು ನಿಯಮಗಳ ಮೂಲಕ ತಂಬಾಕು ಬಳಕೆಯನ್ನು ನಿಯಂತ್ರಿಸಲಾಗುತ್ತಿದೆ.
ಆದರೆ, ಭಾರತದಲ್ಲಿ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಚಲನಚಿತ್ರ ಮತ್ತು ಜಾಹೀರಾತುಗಳಿಗಿಂತ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳೊಂದಿಗೆ ನೇರವಾಗಿ ಮಾತನಾಡಿದಾಗ ಪರಿಣಾಮಾಕಾರಿಯಾಗುತ್ತದೆ. ತಂಬಾಕು ಬಳಕೆಯನ್ನು ತೊರೆದು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಜನರನ್ನು ಪ್ರೇರೇಪಿಸುವುದು ನಮ್ಮ ಹೊಣೆಗಾರಿಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ಯಾನ್ಸರ್ ರೆಡಿಯೊ ಥೆರಪಿ ತಜ್ಞವೈದ್ಯರಾದ ಡಾ. ಇಮ್ತಿಯಾಜ ಅವರು ಮಾತನಾಡಿ, ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್’. ಧೂಮಪಾನ ಮಾಡುವ ವ್ಯಕ್ತಿಯ ಸುತ್ತಮುತ್ತಲಿರುವವರಿಗೂ ಇದು ಬಹಳ ಹಾನಿಕಾರಕ. ತಂಬಾಕು ಒಂದು ಅಪಾಯಕಾರಿ ಪದಾರ್ಥ. ಇದರಲ್ಲಿ ಅನೇಕ ಹಾನಿಕಾರಕ ರಾಸಾಯನಿಕಗಳು ಇವೆ. ತಂಬಾಕು ಬಳಕೆ ನಿಲ್ಲಿಸುವದರಿಂದ ಸುಮಾರು ಶೇ. 70 ಕ್ಯಾನ್ಸರ ರೋಗ ಬರುವುದನ್ನು ತಡೆಗಟ್ಟಬಹುದು. ಭಾರತದಲ್ಲಿ ಸುಮಾರು ಒಂಬತ್ತರಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಕ್ಯಾನ್ಸರ್ ತಜ್ಞವೈದ್ಯರಾದ ಡಾ. ರಶ್ಮಿ ಪಾಟೀಲ ಅವರು ಮಾತನಾಡಿ, ವಿಶ್ವದಲ್ಲಿಯೇ ಅತೀ ಹೆಚ್ಚು ತಂಬಾಕು ಬೆಳೆಯುವ ಭಾರತದಲ್ಲಿಯೇ ಬಾಯಿ ಕ್ಯಾನ್ಸರ್ ರೋಗಿಗಳು ಹೆಚ್ಚಾಗಿದ್ದಾರೆ. ಬೆಳೆಯುವ ರೈತರಿಗೂ ಕೂಡ ತಂಬಾಕಿನ ದುಷ್ಪರಿಣಾಮದ ಅರಿವು ಇಲ್ಲ. ತಂಬಾಕು ಸೇವಿಸುವದರಿಂದ ಹಸಿವು ಕೂಡ ಆಗುವುದಿಲ್ಲ. ತಂಬಾಕು ನಿಯಂತ್ರಣ ಕಾಯ್ದೆ ಇದ್ದರೂ ಕೂಡ ಪರಿಣಾಮಕಾರಿಯಾಗುತ್ತಿಲ್ಲ. ತಂಬಾಕು ಸೇವಿಸುವ ಶೇ. 90 ರಷ್ಟು ಜನರಿಗೆ ಕ್ಯಾನ್ಸರ ಬರುತ್ತೆ ಎಂದು ಗೊತ್ತಿದ್ದರೂ ಕೂಡ ಅದನ್ನು ತ್ಯಜಿಸುವುದಿಲ್ಲ. ರೋಗಬಂದಮೇಲೆ ತ್ಯಜಿಸುವದು ನಿಷ್ಪ್ರಯೋಜಕ ಎಂದು ಎಚ್ಚರಿಕೆ ನೀಡಿದರು.
ಆಸ್ಪತ್ರೆಯ ಸಹಾಯಕ ಪ್ರಧಾನ ವ್ಯವಸ್ಥಾಪರಾದ ಲೋಕೇಶ ಎನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಂಬಾಕು ಸೇವನೆಯಿಂದ ಪರಿಸರದ ನೈರ್ಮಲ್ಯ ಮಲೀನಗೊಳ್ಳುತ್ತದೆ. ಅಶುದ್ದತೆ ಎದ್ದು ಕಾಣುತ್ತದೆ. ಆದ್ದರಿಂದ ತಂಬಾಕು ಸೇವನೆ ತ್ಯಜಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವದು ಆದ್ಯ ಕರ್ತವ್ಯವಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಂಬಾಕು ಸೇವೆನೆಯನ್ನು ಸಂಪೂರ್ಣವಾಗಿ ತ್ಯಜಿಸಿದ ಸಿಬ್ಬಂದಿಗಳನ್ನು ಸತ್ಕರಿಸಲಾಯಿತು.
ವೇದಿಕೆ ಮೇಲೆ ಡಾ. ಭಾಗ್ಯಶ್ರೀ ಪಾಟೀಲ, ಡಾ. ಜ್ಞಾನೇಶ ಮೋರಕರ, ಡಾ. ಬಸವರಾಜ ಬಿಜ್ಜರಗಿ, ಡಾ. ಭಿಮಸೇನ ಟೆಕ್ಕಳಕಿ ಉಪಸ್ಥಿತರಿದ್ದರು. ಮಾನವ ಸಂಪನ್ಮೂಲ ಅಧಿಕಾರಿ ಕಾವ್ಯಾ ಪಾಟೀಲ ನಿರೂಪಿಸಿದರು.
Laxmi News 24×7