ಚೆನ್ನೈ: ರಸ್ತೆಬದಿ, ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಬ್ಯಾನರ್, ಪೋಸ್ಟರ್‌ಗಳನ್ನು ಹಾಕಬೇಡಿ ಎಂದು ಪಕ್ಷದ ಕಾರ್ಯಕರ್ತರು, ನಾಯಕರಿಗೆ ಸಿಎಂ ವಿಜಯ್ ನೇತೃತ್ವದ ಟಿವಿಕೆ ಮನವಿ ಮಾಡಿದೆ.
ಪಕ್ಷದ ಕಾರ್ಯಕರ್ತರು ಹುಟ್ಟುಹಬ್ಬ, ಕುಟುಂಬ ಕಾರ್ಯಕ್ರಮಗಳು ಅಥವಾ ಇತರೆ ಆಚರಣೆಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಬ್ಯಾನರ್, ಪೋಸ್ಟರ್‌ಗಳು ಅಥವಾ ಫ್ಲೆಕ್ಸ್‌ಗಳನ್ನು ಹಾಕಬಾರದು ಎಂದು ಟಿವಿಕೆ (ತಮಿಳಗ ವೆಟ್ರಿ ಕಳಗಂ) ಸ್ಪಷ್ಟ ಸೂಚನೆ ನೀಡಿದೆ.
‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟಿವಿಕೆ, ತಮಿಳಗ ವೆಟ್ರಿ ಕಳಗಂ ತಮಿಳುನಾಡಿನ ಜನರ ಕಲ್ಯಾಣದ ಉದ್ದೇಶದಿಂದ ಸ್ಥಾಪನೆಯಾಗಿದೆ. ಜನರ ವಿಶ್ವಾಸದಿಂದ ಮುಖ್ಯಮಂತ್ರಿ ಸ್ಥಾನಕ್ಕೇರಿರುವ ನಮ್ಮ ನಾಯಕರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂಬುದನ್ನು ಎಲ್ಲರೂ ನೆನಪಿಡಬೇಕು ಎಂದು ತಿಳಿಸಿದೆ.
ರಸ್ತೆಬದಿ ಬ್ಯಾನರ್ ಕಟ್ಟುವುದು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳ ಮೂಲಕ ಜನರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಕ್ಷ ಎಚ್ಚರಿಕೆ ನೀಡಿದೆ.
ರಾಜಕೀಯ ಕಾರ್ಯಕ್ರಮಗಳು ಹಾಗೂ ನಾಯಕರ ಹುಟ್ಟುಹಬ್ಬದ ವೇಳೆ ರಸ್ತೆಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಇದರಿಂದ ಸಂಚಾರ ಸಮಸ್ಯೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆ ಟಿವಿಕೆ ಸರ್ಕಾರದ ಈ ಕ್ರಮವನ್ನು ಹಲವರು ಸ್ವಾಗತಿಸಿದ್ದಾರೆ.
ಇದರ ಜೊತೆಗೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಟಿಎಎಸ್‌ಎಮ್‌ಎಸಿ ವತಿಯಿಂದ ನಡೆಸಲಾಗುತ್ತಿರುವ 717 ಸರ್ಕಾರಿ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಿದೆ. ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಬಸ್ ನಿಲ್ದಾಣಗಳ ಸಮೀಪ ಇರುವ ಮದ್ಯದಂಗಡಿಗಳನ್ನು ಎರಡು ವಾರಗಳೊಳಗೆ ಮುಚ್ಚಬೇಕು ಎಂದು ಸರ್ಕಾರ ಸೂಚಿಸಿದೆ.
Laxmi News 24×7