Breaking News

ಭೀಷ್ಮ ಕೆರೆಯಲ್ಲಿ ಮೀನುಗಳ ಮಾರಣಹೋಮ; ವಿಷ ಬೆರೆತ ಅನುಮಾನ

Spread the love

ಗದಗ: ನಗರದ ಹೃದಯ ಭಾಗದಲ್ಲಿರುವ (Gadag) ಐತಿಹಾಸಿಕ ಭೀಷ್ಮ ಕೆರೆಯಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕೆರೆ ನೀರು ಕಲುಷಿತವಾಗಿದೆಯಾ, ಯಾರಾದರೂ ವಿಷಕಾರಿ ವಸ್ತು ಹಾಕಿದ್ದಾರಾ ಎಂಬ ಅನುಮಾನ ಇದೀಗ ವ್ಯಕ್ತವಾಗುತ್ತಿದೆ. ಮೀನುಗಳ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ಜಲಮೂಲವಾಗಿರುವ ಭೀಷ್ಮ ಕೆರೆಯ ದಡದಲ್ಲಿ ಸಾಕಷ್ಟು ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ. ಪ್ರತಿದಿನ ಕೆರೆ ಬಳಿ ಓಡಾಡುವ ಜನರು ಈ ದೃಶ್ಯ ನೋಡಿ ಆತಂಕಗೊಂಡಿದ್ದಾರೆ.

ಕೆರೆ ನೀರು ವಿಷವಾಗಿದೆಯಾ? ಎಂಬ ಪ್ರಶ್ನೆ ಇದೀಗ ಸ್ಥಳೀಯರಲ್ಲಿ ಮೂಡಿದೆ. ಯಾರಾದರೂ ಕ್ರಿಮಿನಾಶಕ ಅಥವಾ ಬೇರೆ ವಿಷಕಾರಿ ವಸ್ತುಗಳನ್ನು ನೀರಿಗೆ ಹಾಕಿದ್ದಾರಾ ಎಂಬ ಅನುಮಾನವೂ ಇದೆ. ಮತ್ತೊಂದೆಡೆ, ಬಹಳ ದಿನಗಳಿಂದ ಕೆರೆಗೆ ಚರಂಡಿ ನೀರು ಸೇರುತ್ತಿರುವುದರಿಂದ ಕಲುಷಿತ ನೀರಿನಿಂದಲೇ ಮೀನುಗಳು ಮೃತಪಟ್ಟಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಸಮಸ್ಯೆ ಇಂದು ನಿನ್ನೆಯದಲ್ಲ ಎಂಬುದು ಸ್ಥಳೀಯರ ಆರೋಪ. ಭೀಷ್ಮ ಕೆರೆಗೆ ಚರಂಡಿ ನೀರು ಸೇರುತ್ತಿರುವ ಬಗ್ಗೆ ಈ ಹಿಂದೆಯೂ ದೂರುಗಳು ಕೇಳಿಬಂದಿದ್ದವು. ಕೆರೆಯ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗುವುದರಿಂದ ಗಬ್ಬು ವಾಸನೆ ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಇತ್ತೀಚೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಅವರು ಗದಗ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭೀಷ್ಮ ಕೆರೆಗೆ ತೆರಳಿದ್ದರು. ಆ ವೇಳೆ ಕೆರೆಗೆ ಚರಂಡಿ ನೀರು ಸೇರುತ್ತಿರುವುದನ್ನು ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಲುಷಿತ ನೀರು ಕೆರೆಗೆ ಸೇರುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೂ ಇದೀಗ ಕೆರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನುಗಳು ಸತ್ತು ಬಿದ್ದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಮೊದಲೇ ಎಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೀನುಗಳ ಸಾವಿಗೆ ನಿಜವಾದ ಕಾರಣ ತಿಳಿಯಲು ಕೆರೆ ನೀರು ಮತ್ತು ಸತ್ತ ಮೀನುಗಳ ಮಾದರಿಯನ್ನು ಪರೀಕ್ಷೆ ಮಾಡಬೇಕಿದೆ. ನೀರಿನಲ್ಲಿ ಯಾವುದೇ ವಿಷಕಾರಿ ಅಂಶವಿದೆಯೇ ಅಥವಾ ಕಲುಷಿತ ಚರಂಡಿ ನೀರಿನಿಂದ ಸಮಸ್ಯೆಯಾಗಿದೆಯೇ ಎಂಬುದು ಪರೀಕ್ಷೆಯ ನಂತರವೇ ಸ್ಪಷ್ಟವಾಗಲಿದೆ.

ಈ ಘಟನೆಗೆ ಕಾರಣ ಏನು ಎಂಬುದನ್ನು ಅಧಿಕಾರಿಗಳು ತಕ್ಷಣ ಪತ್ತೆಹಚ್ಚಬೇಕು. ಕೆರೆಗೆ ಚರಂಡಿ ನೀರು ಸೇರುವುದನ್ನು ಶಾಶ್ವತವಾಗಿ ತಡೆಯಬೇಕು. ಜೊತೆಗೆ ಕೆರೆಯ ನೀರಿನ ಗುಣಮಟ್ಟವನ್ನು ಪರಿಶೀಲಿಸಿ, ಮೀನುಗಳ ಸಾವಿಗೆ ನಿಖರ ಕಾರಣವನ್ನು ಜನರಿಗೆ ತಿಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ