ಬೆಂಗಳೂರು: ಆಡಳಿತಾತ್ಮಕ ಉದ್ದೇಶಗಳಿಗಾಗಿ ರಾಜ್ಯದ್ಯಂತ 368 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಎಂದು ಹೈಕೋರ್ಟ್ ಗುರುವಾರ (ಏ.16) ಆದೇಶ ಹೊರಡಿಸಿದೆ. ಈ ವರ್ಗಾವಣೆ ಪಟ್ಟಿಯಲ್ಲಿ 114 ಜಿಲ್ಲಾ ನ್ಯಾಯಾಧೀಶರು, 139 ಸಿವಿಲ್ ನ್ಯಾಯಾಧೀಶರು ಮತ್ತು 115 ಹಿರಿಯ ಸಿವಿಲ್ ನ್ಯಾಯಾಧೀಶರು ಸೇರಿದ್ದು, ವಿನಯ್ ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದ್ದ ಗಜಾನನ ಭಟ್ ಕೂಡ ವರ್ಗಾವಣೆ ಆಗಿರುವುದು ಗಮನಾರ್ಹ.
ಈ ಆದೇಶವು ಜೂ. 1ರಿಂದ ಜಾರಿಗೆ ಬರಲಿದೆ. ಹೈಕೋರ್ಟ್ನ ಹಾಲಿ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಅವರನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಅಲ್ಲಿ ನ್ಯಾಯಾಧೀಶರಾಗಿದ್ದ ಎಂ. ಚಂದ್ರಶೇಖರ್ ರೆಡ್ಡಿ ಅವರನ್ನು ರಿಜಿಸ್ಟ್ರಾರ್ ಜನರಲ್ ಸ್ಥಾನಕ್ಕೆ ವರ್ಗಾಯಿಸಲಾಗಿದೆ.
ಇನ್ನು ಬಿಜೆಪಿಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ತೀರ್ಪು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರನ್ನು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಅವರಿಂದ ತೆರವಾಗಿರುವ ಸ್ಥಾನಕ್ಕೆ ಕೆ.ಬಿ ಶಿವಪ್ರಸಾದ್ ಅವರನ್ನು ನೇಮಿಸಲಾಗಿದೆ. ವರ್ಗಾವಣೆಯೂ ಜೂ. 1ರಿಂದ ಜಾರಿಯಾಗುವುದರಿಂದ ಕೊಲೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲು ಯಾವುದೇ ಸಮಸ್ಯೆಯಿರುವುದಿಲ್ಲ ಎಂದು ತಿಳಿಸಲಾಗಿದೆ.
Laxmi News 24×7