ಬೆಳಗಾವಿಯ ಸಾಂಸ್ಕೃತಿಕ ಲೋಕದಲ್ಲಿ ಏಪ್ರಿಲ್ 12, 2026ರ ಭಾನುವಾರ ಒಂದು ಮಹತ್ವದ ದಿನವಾಗಿತ್ತು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ (ಚೆನ್ನಮ್ಮ ವೃತ್ತ) ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವು ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ನೆರವೇರಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಾ ಕಿತ್ತೂರ ಅವರು ವಹಿಸಿದ್ದರು. ಸಾಹಿತ್ಯಿಕ ಪರಿಸರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ನಾಡಿನ ಗಣ್ಯರು ಸಾಕ್ಷಿಯಾದರು. ದತ್ತಿ ದಾನಿಗಳಾದ ಡಾ. ವಿಜಯಲಕ್ಷ್ಮೀ ಪುಟ್ಟಿ ಹಾಗೂ ಹಿರಿಯ ಸಾಹಿತಿಗಳಾದ ಶ್ರೀಮತಿ ಜಯಶೀಲಾ ವಿ. ಬ್ಯಾಕೋಡ ಅವರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು.
ಆದರ್ಶ ತಂದೆ ಪ್ರಶಸ್ತಿ
ದಿ. ಮಲ್ಲಪ್ಪ ಭ. ತಿರ್ಲಾಪೂರ ಅವರ ಸ್ಮರಣಾರ್ಥವಾಗಿ ನೀಡಲಾಗುವ ಈ ಪ್ರಶಸ್ತಿಯನ್ನು ತುಮಕೂರಿನ ವಚನ ಸಾಹಿತ್ಯ ಮಂದಾರ ಫೌಂಡೇಶನ್ ಅಧ್ಯಕ್ಷರಾದ ಡಾ. ವಿಜಯಕುಮಾರ ಕಮ್ಮಾರ ಅವರಿಗೆ ಪ್ರದಾನ ಮಾಡಲಾಯಿತು. ಅವರ ಸುದೀರ್ಘ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಗೌರವ ಅರ್ಪಿಸಲಾಯಿತು. ಈ ಪ್ರಶಸ್ತಿಯ ದತ್ತಿ ದಾನಿಗಳು ಡಾ. ವಿಜಯಲಕ್ಷ್ಮೀ ಪುಟ್ಟಿ ಅವರಾಗಿದ್ದರು.
ದಿ. ಶ್ರೀ ವಿ. ಜಿ. ಬ್ಯಾಕೋಡ ಅವರ ಸ್ಮರಣಾರ್ಥವಾಗಿ ನೀಡಲಾಗುವ ಈ ಪ್ರಶಸ್ತಿಯನ್ನು ಬೆಳಗಾವಿಯ ನಿವೃತ್ತ ಅಭಿಯಂತರರಾದ ಶ್ರೀ ರಮೇಶ ಟಿ. ಜಂಗಲ್ ಅವರಿಗೆ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯ ದತ್ತಿ ದಾನಿಗಳು ಶ್ರೀಮತಿ ಜಯಶೀಲಾ ವಿ. ಬ್ಯಾಕೋಡ ಅವರು.
ಉಪಾಧ್ಯಕ್ಷರಾದ ಶ್ರೀಮತಿ ವಾಸಂತಿ ಮೇಳೆದ, ಕಾರ್ಯದರ್ಶಿ ಶ್ರೀಮತಿ ಆಶಾ ಎಸ್. ಯಮಕನಮರಡಿ, ಮತ್ತು ಕೋಶಾಧ್ಯಕ್ಷರಾದ ಡಾ. ಅನ್ನಪೂರ್ಣ ಹಿರೇಮಠ ಅವರು ಕಾರ್ಯಕ್ರಮದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಾಧಕರನ್ನು ಗುರುತಿಸಿ ಗೌರವಿಸುವುದು ಕೇವಲ ಒಂದು ಸಂಪ್ರದಾಯವಲ್ಲ, ಅದು ಸಮಾಜಕ್ಕೆ ನೀಡುವ ಉತ್ತಮ ಸಂದೇಶ ಎಂದು ಅಧ್ಯಕ್ಷೀಯ ನುಡಿಗಳಲ್ಲಿ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ವಿಜಯಕುಮಾರ ಕಮ್ಮಾರ ಅವರು, “ಪ್ರಶಸ್ತಿ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ” ಎಂದು ಭಾವುಕರಾಗಿ ನುಡಿದರು.
ವಚನ ಸಾಹಿತ್ಯ ಮಂದಾರ ಫೌಂಡೇಶನ್ ಮೂಲಕ ತಾವು ಮಾಡುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಕೆಲಸಗಳಿಗೆ ಈ ಪ್ರಶಸ್ತಿ ಹೊಸ ಚೈತನ್ಯ ನೀಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಸಂಸ್ಕಾರ ತಲುಪಬೇಕು ಎಂಬುದು ತಮ್ಮ ಆಶಯವೆಂದು ತಿಳಿಸಿದರು.
’ಆದರ್ಶ ತಂದೆ’ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಪ್ರತಿಯೊಬ್ಬ ತಂದೆಯೂ ಮಗುವಿನ ಮೊದಲ ಗುರು ಮತ್ತು ಮಾರ್ಗದರ್ಶಿಯಾಗಿದ್ದು, ಅವರ ಸ್ಮರಣಾರ್ಥವಾಗಿ ನೀಡುವ ಈ ಪ್ರಶಸ್ತಿ ತಮಗೆ ಲಭಿಸಿರುವುದು ಪೂರ್ವಜನ್ಮದ ಪುಣ್ಯ ಎಂದು ಸ್ಮರಿಸಿದರು.
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘವು ಸಾಹಿತ್ಯದ ಜೊತೆಗೆ ಸಮಾಜದ ಸಾಧಕರನ್ನು ಗುರುತಿಸುತ್ತಿರುವುದು ಶ್ಲಾಘನೀಯ. ದತ್ತಿ ದಾನಿಗಳಾದ ಡಾ. ವಿಜಯಲಕ್ಷ್ಮೀ ಪುಟ್ಟಿ ಅವರ ಈ ಉದಾತ್ತ ಮನೋಭಾವವು ಇತರರಿಗೂ ಮಾದರಿಯಾಗಲಿ ಎಂದು ಹಾರೈಸಿದರು.
Laxmi News 24×7