ಮೂಡಲಗಿ: ಘಟಪ್ರಭಾ ನದಿಗೆ ಮಸಗುಪ್ಪಿ ಬಳಿಯಲ್ಲಿ ನಿರ್ಮಿಸಿರುವ ಸೇತುವೆಗೆ 200ಮೀ. ರವರೆಗೆ ಉದ್ದವಾದ ಒಡ್ಡವಿದ್ದು (ಅಪ್ರೋಚಿಂಗ ರೋಡ್) ಇದರಿಂದ ಪ್ರವಾಹ ಬಂದಾಗ ಸಂಚಾರ ನಿಲ್ಲುವುದು ಮತ್ತು ನದಿ ನೀರಿನ ವಿಸ್ತಾರ ಅಧಿಕವಾಗಿ ಸಾವಿರಾರು ಎಕರೆಯಷ್ಟು ಬೆಳೆ ಹಾನಿಯಾಗುತ್ತದೆ.
ನೂರಾರು ಮನೆಗಳು ಜಲಾವೃತಗೊಳ್ಳುತ್ತವೆ. ಸೇತುವೆಯನ್ನು ವಿಸ್ತರಿಸಿ ಕಮಾನುಗಳನ್ನು ನಿರ್ಮಿಸಿದರೆ ಪ್ರವಾಹದಿಂದಾಗುವ ಹಾನಿ ಮುಕ್ತಗೊಳಿಸಲು ಸಾಧ್ಯ. ಇವೆಲ್ಲವನ್ನು ಪ್ರಸಕ್ತ ಆಯವ್ಯಯದಲ್ಲಿ ಪರಿಗಣಿಸಬೇಕಾಗಿದೆ. ಘಟಪ್ರಭಾ ನದಿಗೆ ಪ್ರವಾಹ ಬಂದಾಗೊಮ್ಮೆ ಸುಣಧೋಳಿ ಮತ್ತು ಅವರಾದಿ ಬ್ರಿಡ್ಜ್ ಕಂ ಬ್ಯಾರೇಜುಗಳು ಜಲಾವೃತಗೊಳ್ಳುತ್ತವೆ. ಇಲ್ಲಿಯ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಸೇತುವೆಗಳನ್ನು ಎತ್ತರಿಸಿ ಹೊಸ ಸೇತುವೆಗಳನ್ನು ನಿರ್ಮಿಸಬೇಕಾಗಿದೆ ಎನ್ನುತ್ತಾರೆ ಬಸವರಾಜ ಗಾಡವಿ.
2018ರಲ್ಲಿ ಅಸ್ಥಿತ್ವಕ್ಕೆ ಬಂದಿರುವ ಮೂಡಲಗಿ ತಾಲ್ಲೂಕು ಕೇಂದ್ರವು ಹಲವು ಸರ್ಕಾರಿ ಕಚೇರಿಗಳಿಂದ ವಂಚಿತವಾಗಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 2022ರಲ್ಲಿ ನಿವೇಶವನ್ನು ಗುರುತಿಸಿ ಸರ್ಕಾರಕ್ಕೆ ಪಸ್ತಾವ ಸಲ್ಲಿಸಿದ್ದರು. ಸರ್ಕಾರವು ₹8.60 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿರುವ ಬಗ್ಗೆ ಸಹ ಕಳೆದ ವರ್ಷ ಜೂನ್ ತಿಂಗಳದಲ್ಲಿ ಶಾಸಕರು ತಿಳಿಸಿದ್ದಾರೆ. ಆದರೆ ಕಾಮಗಾರಿ ಮಾತ್ರ ಇನ್ನು ವರೆಗೆ ಶುರುವಾಗಿಲ್ಲ. ಕೃಷಿ ತೋಟಗಾರಿಕೆ ನೀರಾವರಿ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಗ್ನಿಶಾಮಕ ಘಟಕ ಸೇರಿದಂತೆ ತಾಲ್ಲೂಕು ಕೇಂದ್ರದಲ್ಲಿರಬೇಕಾದ ಸರ್ಕಾರಿ ಕಚೇರಿಗಳು ತ್ವರಿತವಾಗಿ ಆಗಬೇಕಾಗಿದೆ.
Laxmi News 24×7