ಬೆಂಗಳೂರು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 1,934 ಪೌರಕಾರ್ಮಿಕರಿಗೆ ಬುಧವಾರ ಆರೋಗ್ಯ ತಪಾಸಣೆ ನಡೆಸಲಾಯಿತು.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಸ್ವಚ್ಛತಾ ಯೋಧರಾದ ಪೌರಕಾರ್ಮಿಕರ ಆರೋಗ್ಯದ ಜವಾಬ್ದಾರಿ ಪಾಲಿಕೆಯ ಮೇಲಿದೆ. ಇವರ ಆರೋಗ್ಯ ತಪಾಸಣೆಯನ್ನು ಪಾಲಿಕೆಯಿಂದ ಆಗಾಗ್ಗೆ ನಿರ್ವಹಿಸಲಾಗುತ್ತದೆ ಎಂದು ಆರೋಗ್ಯಾಧಿಕಾರಿ ಬಾಲಸುಂದರ್ ತಿಳಿಸಿದರು.
ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ 25 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 49 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಬುಧವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತವಾಗಿ ಸಾಮೂಹಿಕ ಆರೋಗ್ಯ ತಪಾಸಣೆಯನ್ನು ಪೌರ ಕಾರ್ಮಿಕರಿಗಾಗಿ ಹಮ್ಮಿಕೊಳ್ಳಲಾಗಿತ್ತು. ತಪಾಸಣಾ ಕಾರ್ಯಕ್ರಮದಲ್ಲಿ 56 ವೈದ್ಯಾಧಿಕಾರಿಗಳು ಹಾಗೂ 168 ಅರೆ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು. 605 ಪುರುಷ, 1,348 ಮಹಿಳಾ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು.
256 ಪೌರಕಾರ್ಮಿಕರು ಮಧುಮೇಹದಿಂದ ಬಳಲುತ್ತಿದ್ದು, 254 ಮಂದಿಗೆ ಅಧಿಕ ರಕ್ತದೊತ್ತಡವಿದೆ. ನಾಲ್ವರಿಗೆ ಹೃದಯ ಸಂಬಂಧಿ ಸಮಸ್ಯೆಗಳಿದ್ದು, 57 ಮಂದಿಗೆ ದಂತ, 39 ಮಂದಿಗೆ ಕಣ್ಣು, 16 ಮಂದಿಗೆ ಕಿವಿ ಸಮಸ್ಯೆಗಳಿವೆ. 43 ಜ್ವರದ ಪ್ರಕರಣಗಳು ದಾಖಲಾಗಿದ್ದು, 67 ಮಂದಿಗೆ ರಕ್ತಹೀನತೆ ಇದೆ. 1,198 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರು ಎಂದು ಹೇಳಿದರು.
Laxmi News 24×7