Breaking News

ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು: ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ

Spread the love

ಮಂಡ್ಯ: ರಾಜ್ಯ ಸರ್ಕಾರ ಬಿಲ್ ಬಾಕಿ ಉಳಿಸಿಕೊಂಡ ವಿಚಾರವಾಗಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಸಮರಕ್ಕೆ ಮುಂದಾಗಿದ್ದಾರೆ. ಸಾವಿರಾರು ಕೋಟಿ ರೂ ಬಾಕಿ ಬಿಲ್ ಬಿಡುಗಡೆ ಮಾಡದ ಹಿನ್ನೆಲೆ ರಾಜ್ಯ ಕಾಂಗ್ರೆಸ್​​ ಸರ್ಕಾರದ ವಿರುದ್ಧ ತಿರುಗಿಬಿದ್ದ ಗುತ್ತಿಗೆದಾರರು, ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ  ನೀಡಿದ್ದಾರೆ.

ಮಂಡ್ಯದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ.

ಸಭೆ ಬಳಿಕ ಮಾತನಾಡಿದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್, ಸರ್ಕಾರ ಗುತ್ತಿಗೆದಾರರ 37 ಸಾವಿರ ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ಗುತ್ತಿಗೆದಾರರ 950 ಕೋಟಿ ರೂ ಹಣ ಬಾಕಿ ಇದೆ. ಹೀಗಾಗಿ ಗುತ್ತಿಗೆದಾರರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿದ್ರೂ ನಮಗೆ ದುಡ್ಡು ಕೊಡುತ್ತಿಲ್ಲ. ಸಾಲಸೋಲ ಮಾಡಿ ಕೆಲಸ ಮಾಡಿದ್ದೇವೆ, ಈಗ ಬಡ್ಡಿ ಕಟ್ಟಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಿದರೆ ಯಾರೂ ಆಲಿಸುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗ ಕಮಿಷನ್ ಹಾವಳಿ ಹೆಚ್ಚಾಗಿದೆ. ಈ ಹಿಂದೆ ನಮ್ಮ ಬೆನ್ನಿಗೆ ನಿಂತು ಈಗ ಅವರೇ ಭ್ರಷ್ಟರಾಗಿದ್ದಾರೆ. ನಮ್ಮಿಂದಲೇ ಅಧಿಕಾರಕ್ಕೆ ಬಂದವರು ನಮ್ಮನ್ನೇ ಕಡೆಗಣಿಸಿದ್ದಾರೆ. ಸರ್ಕಾರ ಎಚ್ಚೆತ್ತು ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಸರ್ಕಾರಕ್ಕೆ ಆರ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರವಾಗಿ ಇತ್ತೀಚಿನ ರಾಜ್ಯ ಗುತ್ತಿಗೆದಾರರ ಪ್ರತಿನಿಧಿ ಸಂಘವು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಸುಮಾರು 33 ಸಾವಿರ ಕೋಟಿ ರೂ ಮೊತ್ತದ ಪಾವತಿಗಳು ಇನ್ನೂ ಬಾಕಿ ಉಳಿದಿವೆ ಎಂದು ಗಮನಸೆಳೆದಿದ್ದರು. ಜೊತೆಗೆ ತಕ್ಷಣವೇ ಈ ಬಾಕಿ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸಂಘ ಒತ್ತಾಯಿಸಿತ್ತು.


Spread the love

About Laxminews 24x7

Check Also

ಆಯುಧ ಪೂಜೆಗೆ ಕೇವಲ 50 ರೂ. ಕೊಟ್ಟ ರಾಜ್ಯ ಸರ್ಕಾರ..!

Spread the love ಮಂಡ್ಯ : ದಸರಾ ಆಯುಧ ಪೂಜೆಗೆ ಕೇವಲ 50 ರೂ ಕೊಟ್ಟ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ