Breaking News

ಏಪ್ರಿಲ್-ಮೇ ತಿಂಗಳಲ್ಲಿ ಗ್ರಾಪಂ ಚುನಾವಣೆಗೆ ಸರಕಾರ ಸಜ್ಜು: ಶೀಘ್ರವೇ ಮೀಸಲು ಅಧಿಸೂಚನೆ ಪ್ರಕಟ

Spread the love

ಧಾರವಾಡ: ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಮುಗಿಯಲಿದೆ. ಹೀಗಾಗಿ 2026ರ ಏಪ್ರಿಲ್‌- ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಸರಕಾರ ಸಜ್ಜಾಗಿದ್ದು, ಪೂರ್ವಸಿದ್ಧತೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಕೂಡ ನೀಡಿದೆ.

ರಾಜ್ಯದ 5,948 ಗ್ರಾಪಂಗಳ ಪೈಕಿ 5,698 ಗ್ರಾಪಂಗಳಿಗೆ 2020 ಡಿಸೆಂಬರ್‌ನಲ್ಲಿ ಚುನಾವಣೆ ಆಗಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ 2021- 22ರಲ್ಲಿ ನಡೆದಿದ್ದರಿಂದ 2026ರ ಫೆಬ್ರವರಿ ಎರಡನೇ ವಾರಕ್ಕೆ ಈ ಪಂಚಾಯಿತಿ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯಲಿದೆ. ಇದರೊಟ್ಟಿಗೆ 2026ರ ಮಾರ್ಚ್ಗೆ ಮುಗಿಯುವ 92 ಗ್ರಾಪಂಗಳನ್ನು ಸೇರಿಸಿ ಚುನಾವಣೆ ನಡೆಸಲು ಸರಕಾರ ತಯಾರಿ ನಡೆಸಿದೆ. ಈಗಾಗಲೇ ರಾಜ್ಯದ 187 ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲ್‌ ಅವಧಿ ಮುಗಿದಿದೆ. 2021ರಿಂದಲೇ ರಾಜ್ಯದ 31 ಜಿಪಂ ಹಾಗೂ 240 ತಾಪಂಗಳಿಗೂ ಚುನಾಯಿತ ಪ್ರತಿನಿಧಿಗಳಿಲ್ಲ. ಈಗ 5,790 ಗ್ರಾಪಂಗಳನ್ನೂ ಆಡಳಿತಾಧಿಕಾರಿಗಳ ಮೇಲೆ ನಿರ್ವಹಿಸಿದರೆ (ಕೆಲ ಗ್ರಾಪಂಗಳಿಗೆ ನೇಮಿಸಲಾಗಿದೆ) ಸರಕಾರ ಆಕ್ಷೇಪಕ್ಕೆ ಗುರಿಯಾಗುವ ಸಾಧ್ಯತೆಗಳಿವೆ.

ಈ ಮಧ್ಯೆ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟವು ಆಡಳಿತಾಧಿಕಾರಿ ನೇಮಕದ ವಿರುದ್ಧ ಪ್ರತಿಭಟನೆ ಹಾದಿ ತುಳಿದಿತ್ತು. ಚುನಾವಣೆ ಅಧಿಸೂಚನೆ ಹೊರಡಿಸುವವರೆಗೂ ಹಾಲಿ ಆಡಳಿತ ಮಂಡಳಿಯ ಅಧಿಕಾರವನ್ನೇ ಮುಂದುವರಿಸಲು ಒತ್ತಾಯಿಸಿತ್ತು. ಇದಕ್ಕೆ ಜೆ.ಎಚ್‌.ಪಟೇಲ್‌ ಸರಕಾರವು ಗ್ರಾಪಂ ಆಡಳಿತ ಅವಧಿಯನ್ನು 15 ತಿಂಗಳು ಮುಂದುವರಿಸಿರುವ ಉದಾಹರಣೆ ನೀಡಲಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಹೊಸ ಗೊಂದಲ ಸೃಷ್ಟಿಗೆ ಅವಕಾಶ ಬೇಡವೆಂದು ಸರಕಾರ ಈಗ ಗ್ರಾಪಂ ಚುನಾವಣೆ ಸಿದ್ಧತೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಚುನಾವಣಾ ಆಯೋಗವು ಅವಧಿ ಪೂರ್ಣಗೊಂಡ ಗ್ರಾಪಂಗಳಿಗೆ ನಿಗದಿತ ಕಾಲಮಿತಿಯಲ್ಲಿ ಮೀಸಲು ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರಕಾರವನ್ನು ಕೋರಿದೆ. ಜತೆಗೆ ಈ ಬಗ್ಗೆ ಸರಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್‌ ಕೂಡ ಸಲ್ಲಿಕೆ ಆಗಿತ್ತು. ಹೀಗಾಗಿ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಅಡಿ ಈಗ 2026-31ನೇ ಸಾಲಿನ ಗ್ರಾಪಂ ಸಾರ್ವತ್ರಿಕ ಚುನಾವಣೆ ನಡೆಸಲು ಸಿದ್ಧತೆ ಕೈಗೊಳ್ಳಬೇಕು.

ಈ ಬಗ್ಗೆ ಕೈಗೊಂಡ ಕ್ರಮದ ವರದಿಯನ್ನು ಸರಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್‌ ಇಲಾಖೆ ಸರಕಾರದ ಕಾರ್ಯದರ್ಶಿಗಳು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈಗ ಅಂದುಕೊಂಡಂತೆ ಕಾಲಮಿತಿಯಲ್ಲಿ ಮೀಸಲು ಅಧಿಸೂಚನೆ ಹೊರಬಿದ್ದು, ಯಾವುದೇ ಹೊಸ ಗೊಂದಲ ಸೃಷ್ಟಿಯಾಗದೇ ಇದ್ದರೆ ಏಪ್ರಿಲ್‌- ಮೇ ತಿಂಗಳಲ್ಲಿ ಗ್ರಾಪಂಗಳಿಗೆ ಚುನಾವಣೆ ಸರಾಗವಾಗಿ ನಡೆಯಲಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ