Breaking News

ಕೇಂದ್ರ ಬಜೆಟ್‌ ಹೊತ್ತಲ್ಲೇ ಸಿಎಂ ʻಜಸ್ಟೀಸ್ ಫಾರ್ ಕರ್ನಾಟಕʼ ಅಭಿಯಾನ ಶುರು

Spread the love

ಬೆಂಗಳೂರು: ಫೆಬ್ರವರಿ 1 ರ ಭಾನುವಾರ ಕೇಂದ್ರ ಸರ್ಕಾರ ಬಜೆಟ್  ಮಂಡಿಸಲಿದೆ. ಈ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ `ಜಸ್ಟೀಸ್ ಫಾರ್ ಕರ್ನಾಟಕ’ ಅಂತ ಅಭಿಯಾನ ಶುರು ಮಾಡಿದ್ದಾರೆ.

ಕರ್ನಾಟಕಕ್ಕೆ ನ್ಯಾಯ ಬೇಕು ಅಂತ ಕೇಂದ್ರದ ಮೇಲೆ ಒತ್ತಡ ಹೇರೋದು ಇದರ ಉದ್ದೇಶವಾಗಿದೆ. ತೆರಿಗೆ ಅನ್ಯಾಯ, ಅಭಿವೃದ್ಧಿಗೆ ಹಣಕಾಸು ಹಂಚಿಕೆ, ಬೆಂಗಳೂರು ಅಭಿವೃದ್ಧಿಗೆ ಅನುದಾನ ಸೇರಿ ಹಲವು ವಿಷಯ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಈ ಅಭಿಯಾನ ಆರಂಭಿಸಿದ್ದಾರೆ.

ಒತ್ತಾಯಗಳೇನು?
* ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ 1.15 ಲಕ್ಷ ಕೋಟಿ ರೂ. ಗಳಷ್ಟು ಹೂಡಿಕೆ ಅಗತ್ಯವಿದೆ. ಇದಕ್ಕಾಗಿ 16ನೇ ಹಣಕಾಸು ಆಯೋಗವು ಕನಿಷ್ಠ 27,793 ಕೋಟಿ ರೂ.ಗಳನ್ನಾದರೂ ನೀಡುವಂತೆ ಶಿಫಾರಸು ಮಾಡಬೇಕು.

* ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಒತ್ತಾಯ ಮಾಡುತ್ತಿದ್ದಂತೆಯೇ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿರುವ ಶೇ.41 ರಷ್ಟು ಹಂಚಿಕೆಯನ್ನು ಶೇ.50ಕ್ಕೆ ಏರಿಕೆ ಮಾಡಬೇಕು. ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ಕೇಂದ್ರದ ಆದಾಯದ ಶೇ.5 ಕ್ಕೆ ಮಾತ್ರ ಸೀಮಿತಗೊಳಿಸಿ, ಉಳಿಕೆ ಮೊತ್ತವನ್ನು ರಾಜ್ಯಗಳಿಗೆ ಹಂಚಬೇಕು.

 

* ಮಲೆನಾಡು, ಕರಾವಳಿ ಹಾಗೂ ಪಶ್ಚಿಮ ಘಟ್ಟಗಳು ಪರಿಸರ ಸೂಕ್ಷ್ಮ ವಲಯಗಳಾಗಿವೆ. ಅವು ಇಡೀ ಭಾರತದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿವೆ. ಅಲ್ಲಿನ ಕೃಷಿಕರ ಬದುಕು ಸಂಕಷ್ಟದಲ್ಲಿದೆ. ಅದಕ್ಕಾಗಿ ವಿಶೇಷ ಅನುದಾನಗಳನ್ನು ಒದಗಿಸಬೇಕು. ಅಲ್ಲದೆ, ರಾಜಸ್ಥಾನದ ನಂತರ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಒಣ ಭೂಮಿಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಅದಕ್ಕೆ ಅನುದಾನಗಳನ್ನು ಕೊಡಬೇಕು.

* ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕಕ್ಕೆ 5 ವರ್ಷಗಳಲ್ಲಿ 25 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವೂ ಅಷ್ಟೇ ಮೊತ್ತವನ್ನು ಮ್ಯಾಚಿಂಗ್‌ ಗ್ರ್ಯಾಂಟ್‌ ನೀಡಬೇಕು ಹಾಗೂ ಆ ಭಾಗದ ಪರಿಸರ ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಗಾಗಿ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್‌ ನೀಡಬೇಕು.

 

* ವಿಕೇಂದ್ರೀಕರಣದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳನ್ನ ಪ್ರೋತ್ಸಾಹಿಸಲು ಪಂಚಾಯತ್‌ ಅಧಿಕಾರ ಹಂಚಿಕೆ ಸೂಚ್ಯಂಕವನ್ನ ಅಳವಡಿಸಿಕೊಳ್ಳಬೇಕು. ಹಿಂದಿನ ಹಣಕಾಸು ಆಯೋಗಗಳು ಜನಸಂಖ್ಯೆಗೆ ಶೇ.90 ಹಾಗೂ ವಿಸ್ತೀರ್ಣಕ್ಕೆ ಶೇ 10 ರಷ್ಟು ಮಾನದಂಡಗಳನ್ನು ಅಳವಡಿಸಿಕೊಂಡ ಕಾರಣ, ವಿಕೇಂದ್ರೀಕರಣ ಸಾಧಿಸಿದ ರಾಜ್ಯಗಳಿಗೆ ಅನ್ಯಾಯವಾಯಿತು. ಆದ್ದರಿಂದ ಜನಸಂಖ್ಯೆಗೆ ಶೇ 60, ಭೌಗೋಳಿಕ ವಿಸ್ತೀರ್ಣಕ್ಕೆ ಶೇ 20 ಮತ್ತು ಅಧಿಕಾರ ಹಂಚಿಕೆ ಸೂಚ್ಯಂಕಕ್ಕೆ ಶೇ 20ರಷ್ಟು ಮಾನದಂಡಗಳನ್ನ ನಿಗದಿಪಡಿಸಬೇಕು.

* ಪ್ರಕೃತಿ ವಿಕೋಪಗಳನ್ನು ನಿಭಾಯಿಸಲು ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್ ಅನುದಾನಗಳನ್ನು ವೈಜ್ಞಾನಿಕ ವಿಧಾನಗಳ ಮೂಲಕ ಲೆಕ್ಕ ಹಾಕಿ ಹಂಚಿಕೆ ಮಾಡಬೇಕು. 2018-24ರ ಅವಧಿಯಲ್ಲಿ ರಾಜ್ಯವು ಪ್ರಕೃತಿ ವಿಕೋಪಗಳಿಂದಾಗಿ 1.56 ಲಕ್ಷ ಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸಿದೆ. 2002 ರಿಂದಲೂ ಅತಿವೃಷ್ಟಿ, ಬರ, ಪ್ರವಾಹಗಳಿಗೆ ರಾಜ್ಯವು ನಿರಂತರವಾಗಿ ಒಳಗಾಗುತ್ತಲೇ ಇದೆ. ಇಷ್ಟಿದ್ದರೂ ನಮಗೆ ಕೇವಲ 5 ರಿಸ್ಕ್‌ ಫ್ಯಾಕ್ಟರ್‌ ಅಂಕ ನೀಡುವ ಮೂಲಕ ವಂಚಿಸಲಾಗಿದೆ. ಇದನ್ನು 15ಕ್ಕೆ ಏರಿಸಬೇಕು.

 

* 15ನೇ ಹಣಕಾಸು ಆಯೋಗವು ಜನಸಂಖ್ಯೆಯನ್ನು 1971ರ ಬದಲಾಗಿ 2011 ಅನ್ನು ಆಧಾರವಾಗಿರಿಸಿಕೊಂಡ ಕಾರಣದಿಂದಲೂ ನಮಗೆ ತೀವ್ರ ರೂಪದ ಅನ್ಯಾಯವಾಗಿದೆ. ಜನಸಂಖ್ಯಾ ನಿಯಂತ್ರಣದ ಮೂಲಕ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳಿಗೆ ಇದರಿಂದ ದೊಡ್ಡ ಹೊಡೆತ ಬಿದ್ದಿತು. ಜನಸಂಖ್ಯಾ ನಿಯಂತ್ರಣ ಸಾಧಿಸಿದ ರಾಜ್ಯಗಳಿಗೆ ಉತ್ತೇಜನ ನೀಡುವ ಬದಲು ಘೋರ ಶಿಕ್ಷೆ ನೀಡಲಾಯಿತು. ಇದನ್ನು ಸರಿಪಡಿಸಬೇಕಾದರೆ 1971ರ ಜನಸಂಖ್ಯೆಯನ್ನೇ ಮಾನದಂಡವನ್ನಾಗಿ ಇಟ್ಟುಕೊಳ್ಳಬೇಕು ಹಾಗೂ ಜನಸಂಖ್ಯೆಗೆ ನಿಗದಿಪಡಿಸಿರುವ ಪ್ರಾಮುಖ್ಯವನ್ನು ವೈಜ್ಞಾನಿಕವಾಗಿ ಪರಿಗಣಿಸಬೇಕು.

ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಕ್ಸ್‌ ಖಾತೆಯಲ್ಲಿ ಸಿಎಂ ಪೋಸ್ಟ್‌ ಹಂಚಿಕೊಂಡು ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ