ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ ಪ್ರಶ್ನಿಸಿ, ಪ್ರಕರಣದ ಆರೋಪಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಪ್ರಕರಣದಲ್ಲಿ ತಮ್ಮ ವಿರುದ್ಧ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ಆರೋಪಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿದೆ.
ಅರ್ಜಿದಾರರ ನಡೆಗೆ ಹೈಕೋರ್ಟ್ ಅಸಮಾಧಾನ : ಅರ್ಜಿದಾರರ ವಿರುದ್ದ ಬಿಎನ್ಎಸ್ 74(ಮಹಿಳೆಯ ಘನತೆ ಹಾಳು ಮಾಡಲು ದಾಳಿ) ಮತ್ತು 79 ಮಹಿಳೆಯ ಘನತೆಗೆ ದಕ್ಕೆ ತರುವ ಪದ ಬಳಕೆ)ಗಳನ್ನು ಯಾವ ಕಾರಣಕ್ಕೆ ಸೇರ್ಪಡೆ ಮಾಡಿಲ್ಲ. ಅರ್ಜಿದಾರನಿಗೆ ಮಹಿಳೆಯರು ಎಂದರೆ ಗೌರವ ಇಲ್ಲವೇ? ಎಂದು ಪ್ರಶ್ನಿಸಿತು.
ಅರ್ಜಿದಾರ ಇಂತಹ ಮಾತನ್ನೆಲ್ಲಾ ಹೇಗೆ ಆಡಲು ಸಾಧ್ಯ? ಎಂದು ಪ್ರಶ್ನಿಸಿದ ನ್ಯಾಯಪೀಠ, ಒಮ್ಮೆ ಮಾತನಾಡಿದರೆ ಅದನ್ನು ಹಿಂಪಡೆಯುವುದಕ್ಕೆ ಸಾಧ್ಯವಿಲ್ಲ. ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು. ನೀವು ಕ್ಷಮೆ ಕೇಳಿದರೂ ಒಡೆದಿರುವುದು ಮತ್ತೆ ಒಂದಾಗಲು ಸಾಧ್ಯವೇ? ಎಂದು ಹೇಳಿತು.
Laxmi News 24×7