ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಪಟ್ಟಣದ ಭೂತನಗುಡಿ ನಿವಾಸಿಗಳಾದ ಚಂದ್ರಪ್ಪ(80) ಹಾಗೂ ಪತ್ನಿ ಜಯಮ್ಮ(70) ದಂಪತಿಗಳಿಬ್ಬರು ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಚಂದ್ರಪ್ಪ ಮನೆಯ ಬೆಡ್ ರೂಂನಲ್ಲಿ ಮಂಚದ ಮೇಲೆ ಹಾಗೂ ಜಯಮ್ಮ ಅವರು ಹಾಲ್ನ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ಸಾವನ್ನಪ್ಪಿದವರು.![]()
ಈ ದಂಪತಿ ಅನ್ಯೋನ್ಯವಾಗಿದ್ದರು, ಇಬ್ಬರು ಒಟ್ಟಿಗೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಭದ್ರಾವತಿಯ ಹಳೇನಗರ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೃದ್ಧ ದಂಪತಿಗೆ ಮೂವರು ಗಂಡುಮಕ್ಕಳು: ಮೃತ ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಒಬ್ಬರು ಶಿಕ್ಷಕರಾಗಿದ್ದರೆ, ಮತ್ತೋರ್ವ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರ ಸಂಸ್ಥೆಯಲ್ಲಿ ನೌಕರರಾಗಿದ್ದಾರೆ. ಇನ್ನೊಬ್ಬರು ಶಿವಮೊಗ್ಗದ ಚೀಲೂರು ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದಾರೆ.
ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದವರು ಮೇಲೇಳಲಿಲ್ಲ: ನಿನ್ನೆ ಸೋಮವಾರ(ಜ.19) ರಾತ್ರಿ ಊಟ ಮುಗಿಸಿ ಮಲಗಿದ್ದ ದಂಪತಿ ಮಂಗಳವಾರ ಬೆಳಗ್ಗೆ ಮಕ್ಕಳು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಲಿಲ್ಲ. ಮಧ್ಯಾಹ್ನ ಸ್ಥಳೀಯರು ಮನೆಗೆ ಹೋದಾಗ ದಂಪತಿ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ದಂಪತಿ ಪ್ರತಿನಿತ್ಯ ಭದ್ರಾವತಿಯ ಕನಕ ಮಂಟಪದಲ್ಲಿ ವಾಕ್ ಮಾಡುತ್ತಿದ್ದರು, ಹೀಗಾಗಿ ಎಲ್ಲರಿಗೂ ಪರಿಚಿತರಾಗಿದ್ದರು. ಅಕ್ಕಪಕ್ಕದಲ್ಲಿ ಎಲ್ಲರ ಜೊತೆ ಚೆನ್ನಾಗಿದ್ದರು. ವೃದ್ಧ ದಂಪತಿಯ ಸಾವು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Laxmi News 24×7