ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳ ಪುಂಡಾಟ ಮುಂದುವರೆದಿದೆ. ಕೈದಿಗಳಿಗೆ ಐಷಾರಾಮಿ ಸೌಲಭ್ಯಗಳು ಲಭ್ಯವಾಗುತ್ತಿರುವ ವಿಡಿಯೋಗಳು ಇತ್ತೀಚಿಗೆ ವೈರಲ್ ಆದ ಬೆನ್ನಲ್ಲೇ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅದಲ್ಲದೆ ನೂತನ ಡಿಜಿಪಿಯಾಗಿ ಅಲೋಕ್ ಕುಮಾರ್ ಅವರನ್ನು ನೇಮಿಸಲಾಗಿತ್ತು. ಹೀಗಿದ್ದರೂ ಸಹ ಕ್ಷುಲ್ಲಕ ಕಾರಣದಿಂದ ಕೈದಿಗಳು ಕರ್ತವ್ಯನಿರತ ಸಹಾಯಕ ಜೈಲರ್ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಜನವರಿ 7ರಂದು ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್ ಮೇಲೆ ಸಜಾ ಬಂಧಿಗಳು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆನಂದ್ ಮತ್ತು ಅಬ್ದುಲ್ ಘನಿ ಎಂಬ ಇಬ್ಬರು ಕೈದಿಗಳು ಅನವಶ್ಯಕವಾಗಿ ಸಜಾಬಂಧಿ ಕಚೇರಿಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಕರ್ತವ್ಯದಲ್ಲಿದ್ದ ಸಹಾಯಕ ಜೈಲರ್ ಹಾಗೂ ಜೈಲು ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಸಹಾಯಕ ಜೈಲರ್ಗೆ ಒದ್ದಿದ್ದಾರೆ ಅಲ್ಲದೆ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ರೀತಿಯ ಘಟನೆಗಳು ನಿತ್ಯವೂ ನಡೆಯುತ್ತಿದ್ದು, ಕರ್ತವ್ಯ ನಿರ್ವಹಿಸಲು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಜೈಲಿನ ಪ್ರಭಾರ ಅಧೀಕ್ಷಕರು ತಡವಾಗಿ (ಜನವರಿ 16) ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.![]()
ಜೈಲಿನಲ್ಲಿದ್ದ ಮಗನ ಭೇಟಿಗಾಗಿ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ದ ತಾಯಿ(ಪ್ರತ್ಯೇಕ ಘಟನೆ): ಮಗನ ಭೇಟಿಗಾಗಿ ಬಂದಿದ್ದ ತಾಯಿಯೊಬ್ಬಳು ಖಾಸಗಿ ಭಾಗದಲ್ಲಿ ಮೊಬೈಲ್ ಇಟ್ಟುಕೊಂಡು ಬಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಘಟನೆ ಇತ್ತೀಚಿಗೆ ನಡೆದಿತ್ತು.
ಈ ಸಂಬಂಧ ಜೈಲಿನ ಅಧಿಕಾರಿ ಪರಮೇಶ್ ಎಂಬವರು ನೀಡಿದ ದೂರಿನ ಮೇರೆಗೆ ಜೈಲಿನಲ್ಲಿರುವ ಮಗ ಆರೋಪಿ ಭರತ್ ಎಂಬಾತನನ್ನು ನೋಡಲು ಬಂದಿದ್ದ ಆತನ ತಾಯಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಿಸಿಟರ್ ಪಾಸ್ ಪಡೆದು ಬಂದಿದ್ದ ಮಹಿಳೆಯನ್ನು ತಪಾಸಣೆ ಮಾಡಿದಾಗ ಮೊಬೈಲ್ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.
ಕಾರಾಗೃಹ ಮುಖ್ಯದ್ವಾರದ ಹೊರಗೆ ಎಡಭಾಗದಲ್ಲಿರುವ ತಪಾಸಣಾ ವಿಭಾಗ-1 (ಸಾಮಾನ್ಯ ಸಂದರ್ಶನ ವಿಭಾಗ) ಬಂಧಿಗಳ ಸಂದರ್ಶನಕ್ಕೆ ಬರುವ ಸಾರ್ವಜನಿಕರನ್ನು ಮತ್ತು ಅವರು ತರುವಂತಹ ವಸ್ತುಗಳನ್ನು ತಪಾಸಣೆ ಮಾಡಲು ಸಾಮಾನ್ಯ ಕರ್ತವ್ಯಕ್ಕೆ ಕೆಎಸ್ಐಎಸ್ಎಫ್ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜ.2 ರಂದು ಮಧ್ಯಾಹ್ನ 12.10 ಗಂಟೆಗೆ ಸಾಮಾನ್ಯ ಸಂದರ್ಶನಕ್ಕೆ ಮಹಿಳೆಯು ವಿಸಿಟರ್ ಪಾಸ್ ಪಡೆದುಕೊಂಡು ವಿಚಾರಣಾಧೀನ ಕೈದಿ ಭರತ್ನನ್ನು ಮಾತನಾಡಿಸಲು ಬಂದ ವೇಳೆ, ಖಾಸಗಿ ಭಾಗದಲ್ಲಿ ಮೊಬೈಲ್ ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಆ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದರು.
Laxmi News 24×7