Breaking News

ನನ್ನ ಕೊನೆ ಉಸಿರಿರುವವರೆಗೂ ರಾಜ್ಯದ ಸೇವೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ

Spread the love

ಮೈಸೂರು: ಇಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ನನ್ನ ಕೊನೆ ಉಸಿರಿರುವವರೆಗೂ ರಾಜ್ಯದ ಸೇವೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ಟಿ.ನರಸೀಪುರ ತಾಲೂಕಿನ ಕುಪ್ಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮೈಸೂರಿಗೆ ಬಂದಾಗಲೆಲ್ಲಾ ಜನರ ಭೇಟಿ ಮಾಡುವ ಪ್ರಯತ್ನ: ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯ ಡಾ.ಯತೀಂದ್ರ ಅವರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಗೈರುಹಾಜರಿಯಲ್ಲಿ ಯತೀಂದ್ರ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವರು. ಅವರಿಗೆ ಕ್ಷೇತ್ರದ ಎಲ್ಲಾ ಗ್ರಾಮಗಳ ಪರಿಚಯವಿದೆ. ವಾರಕ್ಕೆ ಎರಡು ಮೂರು ಸಾರಿ ಬಂದು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಮೈಸೂರಿಗೆ ಬಂದಾಗಲೆಲ್ಲಾ ಜನರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಮನರೇಗಾ ಹೋರಾಟ ಬೆಂಬಲಿಸಲು ಕರೆ: ವಿಬಿ ಜಿ ರಾಮ್ ಜಿ ಕಾಯ್ದೆ ರದ್ದಾಗಿ, ಮನರೇಗಾ ಪುನಃ ಸ್ಥಾಪನೆಯಾಗುವವರೆಗೆ ಮಾಡುವ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕು. 2005ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಈ ಕಾನೂನು ಜಾರಿ ಮಾಡಿದರು. ಎಲ್ಲರಿಗೂ ಕೆಲಸದ ಹಕ್ಕು ಕೊಟ್ಟರು. ಬಿಜೆಪಿಯವರು ಈಗ ಅದನ್ನು ಕಿತ್ತುಹಾಕುತ್ತಿದ್ದಾರೆ. ಅವರು ಬಡವರು, ಹೆಣ್ಣುಮಕ್ಕಳು, ಕಾರ್ಮಿಕರಿಗೆ ಕೆಲಸ ಕೊಡಲು ಬಿಡುತ್ತಿಲ್ಲ. ನೀವು ಯಾವಾಗ ಕೇಳಿದರೂ ಉದ್ಯೋಗ ಕೊಡುವ ಕಾಯಿದೆಯನ್ನು ಜಾರಿ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರ ಅದನ್ನು ತೀರ್ಮಾನಿಸಲಿದೆ. ವಿಬಿ ಜಿ ರಾಮ್ ಜಿ ರದ್ದಾಗಬೇಕು. ಜನರನ್ನು ತಪ್ಪು ದಾರಿ ಎಳೆಯಲು ರಾಮ್ ಜಿ ಎಂದು ಸೇರಿಸಿದ್ದಾರೆ. ಎಲ್ಲರೂ ಚಳವಳಿಗೆ ತಯಾರಾಗಿ ಎಂದು ಕರೆ ನೀಡಿದರು.

ವರುಣಾ ಕ್ಷೇತ್ರದಲ್ಲಿ ಒಟ್ಟು 1,932 ಕೋಟಿ ರೂ.ಗಳ ಕಾಮಗಾರಿ: ಕುಪ್ಯಾ ಗ್ರಾಮದಲ್ಲಿ ಸುಮಾರು 323 ಕೋಟಿ ರೂ.ಗಳ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ಈ ಬಾರಿ ಅಧಿಕಾರಕ್ಕೆ ಬಂದ ನಂತರ ಮೂರು ಬಾರಿ ವರುಣಾ ಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 22/10/2024ರಲ್ಲಿ 501 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ನಂತರ 9/8/2025ರಂದು 1,108 ಕೋಟಿ ರೂ. ಗಳ ಕಾರ್ಯಕ್ರಮ. ಮತ್ತು ಇಂದು 323 ಕೋಟಿ ಸೇರಿದಂತೆ ಒಟ್ಟು 1,932 ಕೋಟಿ ರೂ.ಗಳ ಕಾಮಗಾರಿಗಳಿಗೆ ವರುಣಾ ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ. ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ವಿರೋಧ ಪಕ್ಷದವರು ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಎರಡುವರೆ ವರ್ಷಗಳಲ್ಲಿ 1,932 ಕೋಟಿ ರೂ.ಗಳನ್ನು ಕೇವಲ ಅಭಿವೃದ್ಧಿಗಾಗಿಯೇ ವೆಚ್ಚ ಮಾಡಲಾಗಿದೆ. ಖಜಾನೆ ಖಾಲಿಯಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಮೈಸೂರು ಜಿಲ್ಲೆಯಲ್ಲಿ ಸುಮಾರು 10,000 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅಭಿವೃದ್ಧಿಗಾಗಿ ಸರ್ಕಾರ ಕ್ರಮ ಕೈಗೊಂಡಿದೆ. 1,15,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ. ವಿರೋಧ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಸಚಿವರಾದ ಶರಣಪ್ರಕಾಶ್ ಪಾಟೀಲ್, ಎಂ.ಸಿ.ಸುಧಾಕರ್, ಸಂಸದ ಸುನೀಲ್ ಬೋಸ್, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ರಾಜ್ಯಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಮೇಲ್ಮನೆ ಸದಸ್ಯ ಡಾ.ತಿಮ್ಮಯ್ಯ ಹಾಗೂ ಶಾಸಕ ರವಿಶಂಕರ್ ಸೇರಿ ಇತರರು ಇದ್ದರು.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ