ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿ ತಂದೆಯೇ ಮಗನ ಕೊಲೆ ಮಾಡಿರುವ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್ ಆಚಾರ್ ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ ಮೃತನ ತಂದೆ ರಮೇಶ್ ಆಚಾರ್.
ನಶೆಯಲ್ಲಿ ಮಚ್ಚಿನಿಂದ ಕೊಲೆ ಮಾಡಿದ ತಂದೆ: ಮದ್ಯದ ಅಮಲಿನಲ್ಲಿ ರಮೇಶ್ ಆಚಾರ್ ತನ್ನ ಮಗ ಪ್ರದೀಪ್ನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಗಂಭೀರ ಗಾಯಗೊಂಡ ಪ್ರದೀಪ್ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಬಳಿಕ ಮಗನ ಮೃತದೇಹವನ್ನು ಹಾಲ್ನಿಂದ ಹೊರಾಂಗಣಕ್ಕೆ ತಂದೆ ತಂದಾಗ ಅಕ್ಕ ಪಕ್ಕದವರು ಆಘಾತಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಂದೆ ಮಗನ ಕಾಟಕ್ಕೆ ಮನೆ ಬಿಟ್ಟು ಹೋಗಿದ್ದ ತಾಯಿ: ಕ್ಷುಲ್ಲಕ ಕಾರಣಕ್ಕೆ ಮದ್ಯಪಾನ ಮಾಡಿ ಆಗಾಗ ಮನೆಯಲ್ಲೇ ತಂದೆ ಮತ್ತು ಮಗ ಗಲಾಟೆ ಮಾಡುತ್ತಿದ್ದರು. ಒಮ್ಮೊಮ್ಮೆ ಜಗಳ ಅತಿರೇಕಕ್ಕೆ ಹೋಗುತ್ತಿತ್ತು. ಇವರ ಕಾಟದಿಂದ ಬೇಸತ್ತ ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು. ನಂತರ ಮನೆಯಲ್ಲಿ ತಂದೆ–ಮಗ ಇಬ್ಬರೇ ವಾಸವಿದ್ದರು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ಕುಮಾರ್ ದಯಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಮುಂದುವರಿಸಲಾಗಿದೆ.
ಯುವಕನ ಕೊಲೆ: ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಸಂಬಂಧ ಯುವಕನನ್ನು ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಉಡೇವಾ ಮೂಲದ ಮಂಜುನಾಥ್ (28) ಮೃತ ಯುವಕ.
ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಅದರಲ್ಲಿ ಕೋಟೆ ಮಂಜುನಾಥ್ ಎಂಬ ವ್ಯಕ್ತಿಗೆ ಆತನ ನಾಲ್ವರು ಸ್ನೇಹಿತರು ಅಡ್ಡಗಟ್ಟಿ ಚಾಕುವಿನಿಂದ ಇರಿದಿದ್ದಾರೆ ಎಂದು ವರದಿಯಾಗಿದೆ. ನಂತರ ಆ ವ್ಯಕ್ತಿ ಶಿವಮೊಗ್ಗದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂಬುದು ತಿಳಿದು ಹೋಗಿ ಪರಿಶೀಲನೆ ಮಾಡಿದಾಗ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆ ವ್ಯಕ್ತಿಯ ಜೊತೆಗಿದ್ದ ಕೋಟೇಶ್ ಎಂಬ ವ್ಯಕ್ತಿಯಿಂದ ದೂರನ್ನು ಪಡೆದುಕೊಂಡಿದ್ದೇವೆ. ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಅಡಿಷನಲ್ ಎಸ್ಪಿ ಜಯಕುಮಾರ್ ತಿಳಿಸಿದ್ದರು.
Laxmi News 24×7