ರೈಲಿಗೆ ಸಿಲುಕಿ ನಿವೃತ್ತ ಎಎಸ್‌ಐ ಆತ್ಮಹತ್ಯೆ
ಮೈಸೂರು: ರೈಲಿಗೆ ಸಿಲುಕಿ ನಿವೃತ್ತ ಎಎಸ್‌ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಕುಕ್ಕರಹಳ್ಳಿ ಬಳಿಯ ರೈಲ್ವೆ ಗೇಟ್ ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಬೋಗಾದಿಯ ನಿವಾಸಿ ಲವಕುಶ (60) ಮೃತ ನಿವೃತ್ತ ಎಎಸ್‌ಐ.
ಕೆ.ಆರ್. ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲವಕುಶ ಅವರು ಮೂರು ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಭಾನುವಾರ ಬೆಳಗ್ಗೆ ಮನೆಯಿಂದ ಹೊರ ಬಂದವರು ಕುಕ್ಕರಹಳ್ಳಿ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ: ನಂಜನಗೂಡಿನಲ್ಲಿ ಶುಕ್ರವಾರ ನಡೆದ ಅಂಧಕಾಸುರ ವಧೆ ಮೆರವಣಿಗೆಯಲ್ಲಿ ವೇಳೆ ಅರ್ಚಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದರು. ಶ್ರೀಕಂಠೇಶ್ವರ ದೇವಾಲಯದ ಸಹಾಯಕ ಶಂಕರ ಉಪಾಧ್ಯಾಯ (55) ಮೃತರು. ಶುಕ್ರವಾರ ಸಂಜೆ ದೇವಾಲಯದ ಮುಂದೆ ಪ್ರತಿ ವರ್ಷ ನಡೆಯುವ ಸಂಪ್ರದಾಯದಂತೆ ಅಂಧಕಾಸುರನ ವಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು. ನೆಲದ ಮೇಲೆ ರಂಗೋಲಿಯಲ್ಲಿ ಬಿಡಿಸಲಾಗಿದ್ದ ಅಂಧಕಾಸುರನ ಭಾವಚಿತ್ರದ ಮೇಲೆ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಶ್ರೀಕಂಠೇಶ್ವರನ ಉತ್ಸವಮೂರ್ತಿಯನ್ನು ಹೊತ್ತ ಅರ್ಚಕರ ತಂಡ ಎಂದಿನ ಆಚರಣೆಯಂತೆ ಹೊತ್ತು ತಂದಿದ್ದರು. ಮಂತ್ರಘೋಷಗಳು ಮುಗಿಲು ಮುಟ್ಟಿತ್ತು. ಭಾವಚಿತ್ರದ ಮೇಲೆ ಪಲ್ಲಕ್ಕಿ ಬರುತ್ತಿದ್ದಂತೆ ಸ್ವಲ್ಪ ದೂರದಲ್ಲಿ ನಿಂತಿದ್ದ ಶಂಕರ ಉಪಾಧ್ಯಾಯ ಅವರು ಪಲ್ಲಕ್ಕಿಯನ್ನು ತಮ್ಮ ಭುಜದ ಮೇಲೆ ಹೊರಲು ಮುಂದೆ ಬಂದು ಭುಜ ಕೊಟ್ಟ ಕೆಲವೇ ಸೆಕೆಂಡ್ಗಳಲ್ಲಿ ಕುಸಿದು ಬಿದ್ದಿದ್ದರು. ಪಕ್ಕದಲ್ಲೇ ನಿಂತಿದ್ದ ಇತರ ಅರ್ಚಕರು ಉಪಾಧ್ಯಾಯ ಅವರ ನೆರವಿಗೆ ಧಾವಿಸಿದ್ದರು. ಕೂಡಲೇ ಶುಶ್ರೂಷೆ ನೀಡಿ ಸ್ಥಳೀಯರು ನಂಜನಗೂಡು ಪಟ್ಟಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿನ ವೈದ್ಯರು ಅರ್ಚಕ ಉಪಾಧ್ಯಾಯ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಘೋಷಿಸಿದ್ದರು.
Laxmi News 24×7