ಇದು ‘ನೇಣು ಭಾಗ್ಯದ ಸರ್ಕಾರ’
ಬಳ್ಳಾರಿ ಘಟನೆಯಲ್ಲಿ ಎಸ್ಪಿಯಲ್ಲ… ಗೃಹ ಸಚಿವರು ಮತ್ತು ಝಮೀರ್ ಅಹ್ಮದರನ್ನು ಅಮಾನತ್ತು ಮಾಡಬೇಕಿತ್ತು; ಆರ್.ಅಶೋಕ್
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಬಳ್ಳಾರಿ ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಿರುವುದು ತಪ್ಪು ನಿರ್ಧಾರ. ಬದಲಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಅಮಾನತು ಮಾಡಬೇಕಿತ್ತು. ಇದು ‘ನೇಣು ಭಾಗ್ಯದ ಸರ್ಕಾರ’ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಗೂಂಡಾಗಳಿಂದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಇಂದು ಬಳ್ಳಾರಿಗೆ ಭೇಟಿ ನೀಡಿದ ಆರ್.ಅಶೋಕ್, ಬಿಜೆಪಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಧೈರ್ಯ ತುಂಬಿದರು. ಜೊತೆಗೆ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಗನ್‌ಮ್ಯಾನ್ ಗುಂಡು ಹಾರಿಸಿದ್ದಾನೆ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದ ಕಾರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಆರೋಪಿಸಿದರು. “ಗನ್ ಅನ್ನು ವಶಕ್ಕೆ ಪಡೆದು ಆರೋಪಿಗಳು ರಾಜ್ಯ ಬಿಟ್ಟು ಓಡಿಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿಯವರ ಮೇಲೆ ಗುಂಡಿನ ದಾಳಿ ಯತ್ನ ನಡೆದಿದೆ. ಆದರೆ ಇದರ ಹೊಣೆಯನ್ನು ಹೊರುವ ಬದಲು ಎಸ್‌ಪಿಯನ್ನು ಬಲಿಪಶುವನ್ನಾಗಿ ಮಾಡಿದ್ದಾರೆ. ಶಾಸಕ ಭರತ್ ರೆಡ್ಡಿಯವರ ಗನ್‌ಮ್ಯಾನ್ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಕ್ಕೆ ಎಸ್‌ಪಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದೀಗ ಆ ಎಸ್‌ಪಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ” ಎಂದು ಹೇಳಿದರು.
ಅಪರಾಧಿಗಳು ಪರಾರಿಯಾದ ನಂತರ ಎಫ್‌ಐಆರ್ ದಾಖಲಿಸುವ ನಾಟಕ ನಡೆಯುತ್ತಿದೆ. “ಸರ್ಕಾರದ ಒತ್ತಡದಿಂದಲೇ ಅಧಿಕಾರಿಗಳು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ.
ಈಗಾಗಲೇ 12 ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಗಂಟೆಯೊಳಗೆ ಎಸ್‌ಪಿಯನ್ನು ಅಮಾನತು ಮಾಡಲಾಗಿದೆ. ಆದರೆ 2.5 ವರ್ಷಗಳಿಂದ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಯಾವುದೇ ಕ್ರಮವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು, ಇದು ‘ನೇಣು ಭಾಗ್ಯದ ಸರ್ಕಾರ’ ಎಂದು ಹೇಳಿದ ಆರ್.ಅಶೋಕ್, ಬಳ್ಳಾರಿ ಘಟನೆ ಸರ್ಕಾರದ ಅರಾಜಕತೆ ಮತ್ತು ರಾಜಕೀಯ ಹಸ್ತಕ್ಷೇಪದ ಜೀವಂತ ಉದಾಹರಣೆ ಎಂದರು.
ಮಾಧ್ಯಮ್ ಗೋಷ್ಠಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
Laxmi News 24×7