ಯಾದಗಿರಿ: ಜಿಲ್ಲೆಯ ಸುರಪುರ ಪಟ್ಟಣದ ನಗರಸಭೆಯ ಕಿರಿಯ ಅಭಿಯಂತರ ಮಹೇಶ್ ಮಾಳಗಿ ಎಂಬುವರ ಬೊಂಬಾಯಿ ಬಸಣ್ಣ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಮಂಗಳವಾರ ರಾತ್ರಿ ನಡೆದಿರುವ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕುಟುಂಬದವರು ಮನೆಯಿಂದ ಹೊರಗಿದ್ದ ಸಂದರ್ಭ ಮನೆಯ ಬೀಗ ಮುರಿದು ಚಿನ್ನ – ಬೆಳ್ಳಿ ಆಭರಣಗಳು ಹಾಗೂ ನಗದು ಸೇರಿದಂತೆ ಸುಮಾರು ₹46.11 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮಂಗಳವಾರ ಸಂಜೆ 7.30ರಿಂದ ರಾತ್ರಿ 10.30ರ ನಡುವೆ ಸುರಪುರದ ದೀವಳಗುಡ್ಡದಲ್ಲಿ ಸಹೋದರನ ಪತ್ನಿಯ ಮನೆಯಲ್ಲಿ ದೇವರ ಕಾರ್ಯಕ್ಕೆ ಕುಟುಂಬದವರು ತೆರಳಿದ್ದರು. ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ.
ಮನೆಯಲ್ಲಿ ಇಟ್ಟಿದ್ದ 642 ಗ್ರಾಂ ಬಂಗಾರದ ಆಭರಣಗಳು (ಮೌಲ್ಯ ₹44.94 ಲಕ್ಷ), 1295 ಗ್ರಾಂ ಬೆಳ್ಳಿಯ ಆಭರಣಗಳು (₹77,700) ಮತ್ತು ₹40,000 ನಗದು ಸೇರಿ ಒಟ್ಟು ₹46,11,700 ಮೌಲ್ಯದ ವಸ್ತುಗಳು ಕಳುವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಬೀಗ ಮುರಿದಿರುವುದನ್ನು ಕಂಡ ಕುಟುಂಬದವರು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸುರಪುರ ಠಾಣೆಗೆ ಅಧಿಕೃತ ದೂರು ದಾಖಲಿಸಲಾಗಿದೆ.
Laxmi News 24×7