ಮಂಗಳೂರು: 2006ರ ಡಿಸೆಂಬರ್ 1ರಂದು ನಡೆದಿದ್ದ ಸುಖಾನಂದ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿ, ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 19 ವರ್ಷಗಳ ಬಳಿಕ ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಸಲಾಂ ಅಡ್ಡೂರು ಬಂಧಿತ ಆರೋಪಿಯಾಗಿದ್ದಾನೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಸುಖಾನಂದ್ ಶೆಟ್ಟಿ ಎಂಬವರನ್ನು ಕಬೀರ್ ಹಾಗೂ ಆತನ ಸಹಚರರು ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ಕಬೀರ್ಗೆ ಲತೀಫ್ ಹಾಗೂ ಪ್ರಸ್ತುತ ಕಿನ್ನಿಪದವು ನಿವಾಸಿ ಅಬ್ದುಲ್ ಸಲಾಂ ಅಡ್ಡೂರು ಎಂಬ ಸಹೋದರರು ಅಡ್ಡೂರು ಟಿಬೇಟ್ ಕಾಲನಿಯಲ್ಲಿರುವ ಮನೆಯಲ್ಲಿ ಆಶ್ರಯ ನೀಡಿ, ಎರಡು ದಿನ ಅಲ್ಲಿಯೇ ಇರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಳ್ಳಲು ಸಹಕಾರ ನೀಡಿದ ನಂತರ ಕಬೀರ್ನನ್ನು ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟು ನಂತರ ಇವರಿಬ್ಬರೂ ತಲೆಮರೆಸಿಕೊಂಡಿದ್ದರು. ಕೃತ್ಯ ನಡೆದ ಮೂರು ತಿಂಗಳ ಬಳಿಕ ಅಬ್ದುಲ್ ಸಲಾಂ ಅಡ್ಡೂರು ವಿದೇಶಕ್ಕೆ ತೆರಳಿದ್ದ. ಪ್ರಕರಣದಲ್ಲಿ ಬಂಧನವಾಗದೇ ತಲೆಮರೆಸಿಕೊಂಡಿದ್ದರಿಂದ ಈತನ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಮನೆ ನೆಲಸಮಗೊಳಿಸಿ, ಬಾಡಿಗೆ ಮನೆಯಲ್ಲಿ ವಾಸವಿದ್ದ: ಅಬ್ದುಲ್ ಸಲಾಂ ಅಡ್ಡೂರು ಸುಮಾರು 19 ವರ್ಷಗಳಿಂದ ಪೊಲೀಸರಿಗೆ ಸಿಗದೇ ನ್ಯಾಯಾಲಯಕ್ಕೂ ಹಾಜರಾಗಿರಲಿಲ್ಲ. ಹೀಗಾಗಿ, ಆರೋಪಿಯು ಬಜಪೆ ಠಾಣಾ ವ್ಯಾಪ್ತಿಯಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ನವೆಂಬರ್ 18(ಮಂಗಳವಾರ) ರಂದು ಬಜಪೆ ಕಿನ್ನಿಪದವು ಬಳಿ ಬಂಧಿಸಿದ್ದಾರೆ. ಈತ 2007ರಲ್ಲಿ ಪಾಸ್ಪೋರ್ಟ್ ಮಾಡಿಕೊಂಡು ಕೆಲವು ವರ್ಷಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡು, ಇತ್ತೀಚೆಗೆ ವಾಪಸ್ ಬಂದಿದ್ದ. ಅಡ್ಡೂರಿನಲ್ಲಿರುವ ತನ್ನ ಮನೆಯನ್ನು ನೆಲಸಮಗೊಳಿಸಿ ಅಲ್ಲಿಂದ ಬಜಪೆಯ ಕಿನ್ನಿಪದವಿನ ಬಾಡಿಗೆ ಮನೆಯಲ್ಲಿ ವಾಸವಿದ್ದ. ಈತನ ಸಹೋದರ ಲತೀಫ್ ಇನ್ನೂ ಸಹ ವಿದೇಶದಲ್ಲಿಯೇ ಕಣ್ತಪ್ಪಿಸಿಕೊಂಡಿದ್ದಾನೆ. ಈ ಪ್ರಕರಣದಲ್ಲಿ 16 ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿದ್ದು, ಉಳಿದ 11 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Laxmi News 24×7