ಬೆಂಗಳೂರು: ಅಕ್ರಮ ನೀರು ಸೋರಿಕೆಗೆ ಕಡಿವಾಣ ಹಾಕುವ ಮೂಲಕ, ಕಲುಷಿತ ನೀರು ಪತ್ತೆ ಹಚ್ಚಿ ಪರಿಶುದ್ಧ ನೀರು ನೀಡುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಅಳವಡಿಸಿಕೊಂಡಿರುವ ನೂತನ ರೋಬೋಟಿಕ್ ತಂತ್ರಜ್ಞಾನ ದೇಶಕ್ಕೆ ಮಾದರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಂಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಕ್ರಮ ಸಂಪರ್ಕ ಪತ್ತೆ ಮತ್ತು ನೀರಿನ ಸೋರಿಕೆ ತಡೆಗೆ ನೂತನವಾಗಿ ರಚಿಸಿರುವ ನೀಲಿ ಪಡೆ ಮತ್ತು ರೊಬೋಟಿಕ್ ತಂತ್ರಜ್ಞಾನ ಅಳವಡಿಕೆ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
“ಬೆಂಗಳೂರಿನ ಜನರಿಗೆ ಪರಿಶುದ್ಧ ನೀರು ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಇದಕ್ಕಾಗಿ ಮಂಡಳಿಯು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಅಕ್ರಮವಾಗಿ ನೀರಿನ ಸಂಪರ್ಕ ಪಡೆದಿರುವ ಎಲ್ಲರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಬಡವ, ಶ್ರೀಮಂತ, ಉದ್ಯಮಿ ಯಾರೇ ಇರಲಿ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಎಲ್ಲರಿಗೂ ತಿಳಿಯಬೇಕು. ಮಂಡಳಿ ನೀರಿನ ಜತೆಗೆ ಕೊಳಚೆ ನೀರು ಸೇರುವುದು ಪತ್ತೆ ಹಚ್ಚಿ ಅದನ್ನ ಕ್ಷಿಪ್ರವಾಗಿ ಸರಿಪಡಿಸಬೇಕು. ಬೆಂಗಳೂರಿನ ಜನರು ನೀರಿನ ಕ್ಯಾನ್ಗಳ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸಿ ಎಂದು ಮಂಡಳಿಗೆ ಸಲಹೆ ನೀಡಿದರು.”
“ದೇಶದಲ್ಲೇ ಇದೊಂದು ನೂತನ ಪ್ರಯೋಗ. ರೋಬೋಟಿಕ್ ತಂತ್ರಜ್ಞಾನದ ಮೂಲಕ ಅಕ್ರಮ ಸಂಪರ್ಕ ತಡೆಗಟ್ಟಲು ಇದೊಂದು ಉತ್ತಮ ಕ್ರಮ. ನೀರು ಕಲುಷಿತಗೊಂಡ ಸಮಯದಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳದೆ, ನೇರವಾಗಿ ರೋಬೋಟಿಕ್ ತಂತ್ರಜ್ಞಾನ ಮೂಲಕವೇ ಮೂಲವನ್ನು ಪತ್ತೆ ಮಾಡಿ ಹೆಚ್ಚು ರಸ್ತೆ ಅಗೆತಕ್ಕೆ ಅವಕಾಶ ಕಲ್ಪಿಸದೆ. ಅಲ್ಲದೇ, ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಿದೆ. ನಾಗರಿಕರಿಗೆ ಅನುಕೂಲವಾಗಬೇಕು ಎಂದು ಈ ರೀತಿ ಮಂಡಳಿ ಈ ಯೋಜನೆ ರೂಪಿಸಿದೆ. ಇದಕ್ಕಾಗಿ ಮಂಡಳಿ ಸಿಬ್ಬಂದಿ, ನೀಲಿ ಪಡೆಗೆ ಅಭಿನಂದನೆ. ಇದು ದೇಶಕ್ಕೆ ಮಾದರಿಯಾಗಲಿ ಎಂದು” ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
Laxmi News 24×7