ವಿಜಯನಗರ: ತಂದೆ-ತಾಯಿ ಗಲಾಟೆ ಬಿಡಿಸುವ ವೇಳೆ ಕೆಳಗೆ ಬಿದ್ದ ತಂದೆಗೆ ಒನಕೆಯಿಂದ ಹೊಡೆದು ಮಗನೇ ಹತ್ಯೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ನಡೆದಿದೆ.
ಜವಳಿ ಶಿವಲಿಂಗಪ್ಪ (60) ಹತ್ಯೆಯಾದ ವ್ಯಕ್ತಿ, ಶಂಕ್ರಪ್ಪ ಕೊಲೆ ಆರೋಪಿ ಆಗಿದ್ದು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಮೃತನ ಪತ್ನಿ ಗಂಗಮ್ಮ ಹೆಚ್ಬಿ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಹೇಳಿಕೆ:
ವಿಜಯನಗರ ಎಸ್ಪಿ ಎಸ್. ಜಾಹ್ನವಿ ಪ್ರಕರಣದ ಕುರಿತು ಮಾಧ್ಯಮ ಹೇಳಿಕೆ ನೀಡಿದ್ದಾರೆ. “ನವೆಂಬರ್ 10 ರಂದು ಮಾಲ್ವಿ ಗ್ರಾಮದ ನಿವಾಸಿ ಗಂಗಮ್ಮ ಎನ್ನುವವರು ಹೆಚ್ಬಿ ಹಳ್ಳಿ ಪೊಲೀಸ್ ಠಾಣೆಗೆ ಒಂದು ದೂರು ನೀಡಿದ್ದಾರೆ. ಅವರಿಗೆ ಅವರ ಮೃತ ಪತಿ ಜವಳಿ ಶಿವಲಿಂಗಪ್ಪ ತುಂಬಾ ವರ್ಷದಿಂದ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು. ಇದನ್ನು ಅವರ ಮಕ್ಕಳು ನೋಡಿಕೊಂಡು ಬಂದಿರುತ್ತಾರೆ. ಅವತ್ತಿನ ದಿನ ಬೇರೆ ಬೇರೆ ವಿಚಾರಕ್ಕೆ ಗಂಗಮ್ಮ ಹಾಗೂ ಜವಳಿ ಶಿವಲಿಂಗಪ್ಪ ನಡುವೆ ಗಲಾಟೆಯಾಗುತ್ತಿರುತ್ತದೆ.
ಇದನ್ನು ನೋಡುತ್ತಿದ್ದ ಈ ದಂಪತಿಯ 2ನೇ ಮಗ ಶಂಕ್ರಪ್ಪ ಜಗಳ ಬಿಡಿಸಲು ಹೋಗಿ ತಳ್ಳಿದಾಗ ಜವಳಿ ಶಿವಲಿಂಗಪ್ಪ ಕೆಳಗೆ ಬೀಳುತ್ತಾರೆ. ಆ ವೇಳೆ ಮಗ ಕೆಳಗೆ ಬಿದ್ದ ತಂದೆಗೆ ಒನಕೆಯಿಂದ ಹಲ್ಲೆ ಮಾಡಿದ್ದು, ಗಂಭೀರ ಗಾಯದಿಂದ ಸ್ಥಳದಲ್ಲೇ ಶಿವಲಿಂಗಪ್ಪ ಮೃತರಾಗುತ್ತಾರೆ. ಈ ಪ್ರಕರಣ ಹಿನ್ನೆಲೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304ರ ಅಡಿ ಕೇಸ್ ದಾಖಲಾಗಿರುತ್ತದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
Laxmi News 24×7