ಬೆಂಗಳೂರು : ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ನಗರದ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗಿನ ಉದ್ದೇಶಿತ ಜೋಡಿ ಸುರಂಗ ಮಾರ್ಗದ ಯೋಜನೆಗಾಗಿ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಮರಗಳನ್ನು ಕಡಿಯುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಸುರಂಗ ಮಾರ್ಗದ ಟೆಂಡರ್ ರದ್ದು ಕೋರಿ ನಟ ಪ್ರಕಾಶ್ ಬೆಳವಾಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರ ಮಾಹಿತಿ ನೀಡಿತು.
ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ನ್ಯಾಯಪೀಠ, ಸುರಂಗ ಮಾರ್ಗದ ಕಾಮಗಾರಿಗಾಗಿ ಲಾಲ್ಬಾಗ್ನಲ್ಲಿ ಮರಗಳನ್ನು ಕಡಿತ ಮಾಡಲಾಗುತ್ತಿದಿಯೇ ಎಂದು ಪ್ರಶ್ನಿಸಿತು. ಇದಕ್ಕೆ ರಾಜ್ಯ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಯಾವುದೇ ಮರ ಕಡಿಯುವುದಿಲ್ಲ ಎಂದು ವಿವರಿಸಿದರು.
ಇದಕ್ಕೆ ಪೀಠ, ಮುಂದಿನ ವಿಚಾರಣೆಯವರೆಗೆ ಲಾಲ್ಬಾಗ್ನಲ್ಲಿ ಯಾವುದೇ ಮರಗಳನ್ನು ಕತ್ತರಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಹೀಗಾಗಿ, ಯಾವುದೇ ಆದೇಶ ಅಥವಾ ಮಧ್ಯಂತರ ಆದೇಶ ಮಾಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿತು.
ಅರ್ಜಿದಾರರ ಪರ ವಾದಿಸಿದ ಸಂಸದ ತೇಜಸ್ವಿ ಸೂರ್ಯ, ಇದು ಕಾಗದದ ಮೇಲಿರುವ ಇನ್ನಷ್ಟೇ ಕಾರ್ಯಗತವಾಗಬೇಕಿರುವ ಯೋಜನೆಯಾದರೂ ಸರ್ಕಾರ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ ಎಂದರು.
ಈ ವೇಳೆ ಪೀಠ, ಇದೇ ಮನವಿಯನ್ನು ಹೊಂದಿರುವ ಮತ್ತೊಂದು ಅರ್ಜಿಯ ವಿಚಾರಣೆಯನ್ನು ಡಿ. 9ಕ್ಕೆ ನಿಗದಿಗೊಳಿಸಲಾಗಿದೆ. ಆ ಅರ್ಜಿಯಲ್ಲಿ ಲಾಲ್ಬಾಗ್ನಲ್ಲಿ ಮರಗಳನ್ನು ಕತ್ತರಿಸಲಾಗುತ್ತದೆಯೇ ಎಂದು ಸರ್ಕಾರವನ್ನು ಕೇಳಲಾಗಿತ್ತು. ಇದಕ್ಕೆ ಸರ್ಕಾರ ಇಲ್ಲ ಎಂದಿದೆ. ಹೀಗಾಗಿ, ನಿಮ್ಮ ವಾದವನ್ನೂ ಆಲಿಸಲಾಗುವುದು. ಅಷ್ಟರೊಳಗೆ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕೆಂದು ತಿಳಿಸಿ ವಿಚಾರಣೆಯನ್ನು ನ್ಯಾಯಾಲಯವು ಡಿ. 9ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ನಗರದ ಹೆಬ್ಬಾಳದಿಂದ ಸಿಲ್ಕ್ಬೋರ್ಡ್ ವರೆಗೂ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಟೆಂಡರ್ ಪ್ರಕ್ರಿಯೆಯ ಡಿಪಿಆರ್ ಅಧಿಸೂಚನೆ ರದ್ದು ಪಡಿಸುವಂತೆ ಕೋರಿ ನಟ ಪ್ರಕಾಶ್ ಬೆಳವಾಡಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಉದ್ದೇಶಿತ ಸುರಂಗ ಮಾರ್ಗಕ್ಕಾಗಿ ನಗರದ ಶ್ವಾಸಕೋಶದಂತಿರುವ ಲಾಲ್ಬಾಗ್ನಲ್ಲಿ 6.5 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಉದ್ದೇಶಿಸಲಾಗಿದೆ. ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಹೊರಡಿಸಿರುವ ಡಿಪಿಆರ್ ಪ್ರಕಾರ 3 ಸಾವಿರಾರು ವರ್ಷಗಳ ಕಾಲದಿಂದ ನೈಸರ್ಗಿಕವಾಗಿ ರಚನೆಯಾಗಿರುವ ಬೃಹದಾಕಾರದ ಬಂಡೆಯಿದ್ದು, ಇದನ್ನು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವನ್ನಾಗಿ ಘೋಷಣೆ ಮಾಡಲಾಗಿದೆ. ಯೋಜನೆಯೀಂದ ಈ ಬಂಡೆಗೆ ಹಾನಿಯಾಗುವ ಸಂಭವವಿದೆ ಎಂದು ಪೀಠಕ್ಕೆ ವಿವರಿಸಿದ್ದರು.
Laxmi News 24×7