Breaking News

SSLC ಟಾಪರ್ಸ್​ಗೆ ದಾವಣಗೆರೆ ಸಂಸದರಿಂದ ಗಿಫ್ಟ್

Spread the love

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ಎಸ್‌ಎಲ್‌ಸಿ ಟಾಪರ್ಸ್​ ಆಗಿರುವ ಜಿಲ್ಲೆಯ 9 ವಿದ್ಯಾರ್ಥಿಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಐದು ದಿನಗಳ ದೆಹಲಿ ಶೈಕ್ಷಣಿಕ ಪ್ರವಾಸ ಆಯೋಜಿಸಿದ್ದಾರೆ. ಲೋಹದ ಹಕ್ಕಿಯಲ್ಲಿ ಪ್ರಯಾಣಿಸಬೇಕೆಂಬ ವಿದ್ಯಾರ್ಥಿಗಳ ಕನಸು ನನಸು ಮಾಡುತ್ತಿರುವ ಸಂಸದರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ತಮ್ಮ ಗೃಹ ಕಚೇರಿಯಲ್ಲಿ ಪ್ರವಾಸಕ್ಕೆ ತೆರಳಲಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಅವರ ಅನಿಸಿಕೆಗಳನ್ನು ಆಲಿಸಿದ ಸಂಸದರು ಬಳಿಕ, ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದ್ದಾರೆ.

ವಿದ್ಯಾರ್ಥಿಗಳ ತಂಡವು ಸೋಮವಾರ ಸಂಜೆ 5-30 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಆರಂಭಿಸಲಿದ್ದಾರೆ. ದೆಹಲಿಯಲ್ಲಿ ಇಂಡಿಯಾ ಗೇಟ್, ಕಮಲ ಮಂದಿರ, ಕುತುಬ್ ಮಿನಾರ್, ಕೆಂಪುಕೋಟೆ, ಕರ್ತವ್ಯ ಪಥ ಮತ್ತು ಸ್ವಾಮಿನಾರಾಯಣ ಮಂದಿರ ಮುಂತಾದ ರಾಷ್ಟ್ರದ ಪ್ರಮುಖ ಸ್ಮಾರಕಗಳು ಹಾಗೂ ಸಾಂಸ್ಕೃತಿಕ ಸ್ಥಳಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ. ಇವರ ಜೊತೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಶಿಕ್ಷಕರೂ ಕೂಡ ತೆರಳಲಿದ್ದಾರೆ.

ಸಂಸದರ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಪ್ರವಾಸ: ವಿದ್ಯಾರ್ಥಿಗಳ ದೆಹಲಿ ಪ್ರವಾಸದ ವೆಚ್ಚ, ವಸತಿ ಊಟ ಸೇರಿ ಎಲ್ಲದರ ಖರ್ಚನ್ನು ಸಂಸದರೇ ಭರಿಸಲಿದ್ದಾರೆ.

“ಈ ಶೈಕ್ಷಣಿಕ ಪ್ರವಾಸದ ಉದ್ದೇಶ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆ ಬೆಳೆಸುವುದಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೇರೇಪಿಸಲು ನಾವು ಉದ್ದೇಶಿಸಿದ್ದೇವೆ. ಹೊನ್ನಾಳಿಯ ಇಬ್ಬರು ಅಸಾಧಾರಣ ವಿದ್ಯಾರ್ಥಿಗಳನ್ನು ಸಹ ಸೇರಿಸಿಕೊಂಡು ಒಟ್ಟಾರೆ ಒಂಬತ್ತು ವಿದ್ಯಾರ್ಥಿಗಳನ್ನು ಕಳುಹಿಸಲಾಗುತ್ತಿದೆ. ಪ್ರಯಾಣ, ವಿಮಾನ ದರ ಹಾಗೂ ವಸತಿ ಸೇರಿದಂತೆ ಎಲ್ಲಾ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಲಾಗುವುದು. ಈ ಸಾಧನೆ ಮಾಡಿದ ಮಕ್ಕಳನ್ನು ನೋಡುವುದರಿಂದ ಪ್ರಸ್ತುತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುತ್ತದೆ. ಅವರು ಕೂಡ ಶ್ರದ್ಧೆಯಿಂದ ಅಧ್ಯಯನ ಮಾಡಿ ಉತ್ತಮ ಫಲಿತಾಂಶ ಗಳಿಸಲು ಸ್ಫೂರ್ತಿಯಾಗಲಿದೆ. ಆದ್ದರಿಂದ ಈ ಪ್ರವಾಸ ಏರ್ಪಡಿಸಲಾಗಿದೆ” ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಯಾರಿಗೆಲ್ಲ ದೆಹಲಿ ಪ್ರವಾಸ ಭಾಗ್ಯ: ಪಿ. ಮಂಜುನಾಥ್, ಧನುಷ್ ಬಿ. ಎನ್, ಪವನ್ ಕುಮಾರ್ ಕೆ.ಪಿ, ಜೇಷ್ಠ ಬಿ, ಅಮೃತಾ ಟಿ.ಎಂ, ಮಿಸ್ಬಾ ನಾಜ್, ಉಷಾ ಹೆಚ್, ಲತಾ ಹೆಚ್.ಎ ಮತ್ತು ಯೋಗೇಶ್ವರಿ ಜೆ.ಬಿ ದೆಹಲಿ ಪ್ರವಾಸಕ್ಕೆ ಆಯ್ಕೆ ಆಗಿರುವ ವಿದ್ಯಾರ್ಥಿಗಳು. ಇವರ ಜೊತೆ ಶಿಕ್ಷಕರಾದ ಬಿ. ಅರುಣ್ ಕುಮಾರ್ ಮತ್ತು ಕೆ.ಎಂ. ನಿಂಗಮ್ಮ ಅವರು ಸಹ ಪ್ರವಾಸಕ್ಕೆ ತೆರಳಲಿದ್ದಾರೆ.

ದೆಹಲಿ ಪ್ರವಾಸ ಆಯೋಜನೆ ಕುರಿತು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಂತಸಗೊಂಡಿದ್ದರು. ಜೊತೆಗೆ ಸಂಸದರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ