ಗಂಗಾವತಿ (ಕೊಪ್ಪಳ): ಇಲ್ಲಿನ ಬಿಜೆಪಿ ಯುವ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಇಲ್ಲಿನ ಲಿಂಗರಾಜ್ ಕ್ಯಾಂಪಿನ ರವಿ ಬಸವರಾಜ ಹಾಗೂ ಗುಂಡಮ್ಮ ಕ್ಯಾಂಪಿನ ನಿವಾಸಿ ಗಂಗಾಧರ ಗೌಳಿ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಕಲಬುರಗಿಯ ಹೊರ ವಲಯದಲ್ಲಿ ಆರೋಪಿಗಳ ಚಹರೆ ಪತ್ತೆ ಹಚ್ಚಿ, ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ಈ ಮೂಲಕ ಬಿಜೆಪಿ ಯುವ ಮುಖಂಡನ ಕೊಲೆ ಪ್ರಕರಣದಲ್ಲಿ ಒಟ್ಟು ಏಳು ಜನರನ್ನು ಬಂಧಿಸಿದಂತಾಗಿದೆ.
ಬಿಜೆಪಿ ಯುವ ಮುಖಂಡನ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದರಿಂದ ಗಂಗಾವತಿ ಪೊಲೀಸರಿಗೆ ಈ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಇದರಿಂದ ತೀವ್ರ ತನಿಖೆಗೆ ಕೈಗೊಂಡು, ಪ್ರಕರಣದ ಪ್ರಮುಖ ಆರೋಪಿಗಳನ್ನು ಕೊನೆಗೂ ಮೂರು ವಾರಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿ ಭಾನುವಾರ ಗಂಗಾವತಿ ನಗರಕ್ಕೆ ಕರೆತಂದಿದ್ದ ಪೊಲೀಸರು, ಕೆಲಕಾಲ ನಗರದಿಂದ ಹೊರವಲಯದಲ್ಲಿರುವ ಗೌಪ್ಯ ಸ್ಥಳದಲ್ಲಿ ಇರಿಸಿದ್ದರು. ಬಳಿಕ ಪೊಲೀಸ್ ಭದ್ರತೆಯಲ್ಲಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಳೆಯ ದ್ವೇಷವೇ ಕೊಲೆಗೆ ಕಾರಣ: ನಗರದ ಹೊರ ವಲಯದಲ್ಲಿರುವ ರಾಣಾ ಪ್ರತಾಪ್ ಸಿಂಗ್ ವೃತ್ತದಲ್ಲಿರುವ ಖಾಸಗಿ ಆಸ್ಪತ್ರೆಯ ಬಳಿ ಅಕ್ಟೋಬರ್ 8ರ ಮಧ್ಯರಾತ್ರಿ ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ (32) ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು. ಹಳೆಯ ದ್ವೇಷವೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದರು.
ಅ.8ರ ತಡರಾತ್ರಿ ಊಟ ಮುಗಿಸಿಕೊಂಡು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ವೆಂಕಟೇಶ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಹಿಂಬಾಲಿಸಿದ ಐವರು ಯುವಕರ ಗುಂಪು, ದ್ವಿಚಕ್ರ ವಾಹನಕ್ಕೆ ಗುದ್ದಿ ಬೀಳಿಸಿದ್ದರು. ಬಳಿಕ ಕೆಳಕ್ಕೆ ಬಿದ್ದ ವೆಂಕಟೇಶನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿ ಮನಬದಂತೆ ಕೊಚ್ಚಿ ಕೊಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶನನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಮಧ್ಯರಾತ್ರಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು ಎಂದು ಪೊಲಿಸರು ಮಾಹಿತಿ ನೀಡಿದ್ದರು.
ಕೊಲೆ ಪ್ರಕರಣದ ಬಳಿಕ ಪರಾರಿಯಾಗಿದ್ದ ಆರೋಪಿಗಳ ಪೈಕಿ ನಾಲ್ವರು ಕಂಪ್ಲಿಗೆ ತೆರಳಿ ಅಲ್ಲಿನ ಪೊಲೀಸರ ಮುಂದೆ ಶರಣಾಗಿದ್ದರು. ಇದೀಗ ಮತ್ತೊಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ಪ್ರಕರಣ ಕುರಿತು ವೆಂಕಟೇಶನ ತಂದೆ ಹಂಪಣ್ಣ ಜಂತಕಲ್ ಅವರು ನೀಡಿದ ದೂರಿನ ಮೇರೆಗೆ ಗಂಗಾವತಿ ನಗರಠಾಣೆಯಲ್ಲಿ ದೂರು ದಾಖಲಾಗಿದೆ.
Laxmi News 24×7