ಕಾರವಾರ (ಉತ್ತರ ಕನ್ನಡ) : ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಹುದಿನದ ಕನಸು ಕಾಣುತ್ತಿದ್ದ ಉತ್ತರಕನ್ನಡದ ಜನರಿಗೆ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸುಮಾರು ₹190 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡವು ಕೊಂಚಮಟ್ಟಿಗೆ ನಿರಾಳತೆ ನೀಡಿತ್ತು.
ಆದರೆ, ಈ ಅತ್ಯಾಧುನಿಕ ಸ್ಪರ್ಶದ ಕಟ್ಟಡದ ಗುಣಮಟ್ಟದ ಬಗ್ಗೆ ಮೊದಲಿನಿಂದಲೂ ಕೇಳಿಬರುತ್ತಿದ್ದ ಕಳಪೆ ಕಾಮಗಾರಿಯ ಆರೋಪಕ್ಕೆ ಇದೀಗ ಸ್ಪಷ್ಟ ಪುಷ್ಟಿ ದೊರೆತಿದೆ.
ಆಸ್ಪತ್ರೆ ಕಟ್ಟಡ ಉದ್ಘಾಟನೆಗೂ ಮುನ್ನವೇ ಕಟ್ಟಡದ ಒಂದು ಭಾಗದ ರೂಫ್ (POP) ಕಿತ್ತು ಬಿದ್ದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಆಸ್ಪತ್ರೆಯ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ರೋಗಿಗಳನ್ನು ಮತ್ತು ವಿಭಾಗಗಳನ್ನು ಶಿಫ್ಟ್ ಮಾಡುವ ಕೆಲಸ ಸಾಗಿದೆ. ಹೀಗಿರುವಾಗಲೇ, ಎರಡನೇ ಅಂತಸ್ತಿನಲ್ಲಿ ಅಳವಡಿಸಿದ್ದ ಪಿಒಪಿ ರೂಫ್ ಕುಸಿದು ಬಿದ್ದಿದೆ.
ಅದೃಷ್ಟವಶಾತ್ ಆ ಸಮಯದಲ್ಲಿ ಆ ಭಾಗದಲ್ಲಿ ಯಾರೂ ಓಡಾಡುತ್ತಿರಲಿಲ್ಲವಾದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.ಆದರೆ, ಕಳಪೆ ಕಾಮಗಾರಿಯ ತೀವ್ರತೆ ಎಷ್ಟಿದೆ ಎಂದರೆ,
ಈ ಕುಸಿದ ರೂಫ್ ಸಮೀಪದಲ್ಲಿಯೇ ಶಸ್ತ್ರಚಿಕಿತ್ಸಾ ಕೊಠಡಿ ಇದೆ. ಅಲ್ಲದೆ, ಎರಡನೇ ಅಂತಸ್ತಿನಲ್ಲಷ್ಟೇ ಅಲ್ಲದೆ ಆಸ್ಪತ್ರೆಯ ಮೊದಲನೇ ಅಂತಸ್ತಿನಲ್ಲೂ ಇದೇ ರೀತಿ ಕುಸಿತ ಕಂಡು ಬಂದಿರುವುದು ಕಟ್ಟಡದ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Laxmi News 24×7