ಬೆಳಗಾವಿ : ಕಲಿತಿದ್ದು ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್. ಬಾರ್ ಉದ್ಯಮ, ಸರ್ಕಾರಿ ಗುತ್ತಿಗೆ ಸೇರಿ ಮತ್ತಿತರ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡಿದ್ದರು. ವ್ಯಾಪಾರದಲ್ಲಿ ಲಕ್ಷ ಲಕ್ಷ ಗಳಿಸಿದರೂ ಮನಸ್ಸಿಗೆ ಮಾತ್ರ ನೆಮ್ಮದಿ ಇರಲಿಲ್ಲ. ಈಗ ಅವರಿಗೆ ನೆಮ್ಮದಿ ಸಿಕ್ಕಿದ್ದು, ಸಾವಯವ ಕೃಷಿಯಲ್ಲಿ. 80ರ ಇಳಿ ವಯಸ್ಸಿನಲ್ಲೂ ಉತ್ತಮ ಆರೋಗ್ಯದ ಜೊತೆಗೆ ಲಕ್ಷ ಲಕ್ಷ ಆದಾಯ ಗಳಿಸುವ ಮೂಲಕ ಯುವಕರನ್ನೂ ನಾಚಿಸುವಂತೆ ಜಿಲ್ಲೆಯ ಕೃಷಿಕರೊಬ್ಬರು ಸಾಧನೆ ಮಾಡಿದ್ದಾರೆ.
ಹೌದು, ತಲೆ ಮೇಲೆ ಟೋಪಿ, ಸಫಾರಿ ಡ್ರೆಸ್ ತೊಟ್ಟು ಯುವಕರೊಂದಿಗೆ ತಮ್ಮ ಜಮೀನಿನಲ್ಲಿ ಹೆಜ್ಜೆ ಹಾಕುತ್ತಿರುವ ವ್ಯಕ್ತಿಯೇ ಈ ನಾಗೇಶ ಮಾಯಪ್ಪಾ ಗಡ್ಡೆ. ಇವರು ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಕಣಬರಗಿ ನಿವಾಸಿ. ತಮ್ಮ ಮನೆಯ ಸುತ್ತಲಿನ ಒಂದೂವರೇ ಎಕರೆ ಜಾಗವನ್ನು ಸಾವಯವ ಗೊಬ್ಬರ ತಯಾರಿಸಲು, ವಿವಿಧ ಹಣ್ಣು, ತರಕಾರಿ, ತೆಂಗು ಸೇರಿ ಮತ್ತಿತರ ಬೆಳೆ ಬೆಳೆಯಲು ಬಳಸುತ್ತಿದ್ದಾರೆ.
ಇಲ್ಲಿನ ಒಂದೂವರೆ ಎಕರೆ ಜಮೀನು ಹೊರತುಪಡಿಸಿ ತುಮ್ಮರಗುದ್ದಿ ಗ್ರಾಮದ ಬಳಿ 22 ಎಕರೆ ಜಮೀನು ಹೊಂದಿರುವ ನಾಗೇಶ ಗಡ್ಡೆ ಅಲ್ಲಿ ಮಾವು, ಅರಿಶಿಣ, ಮೆಣಸಿನಕಾಯಿ, ಶುಂಠಿ ಬೆಳೆದಿದ್ದಾರೆ. ಅವರೇ ಹೇಳುವ ಪ್ರಕಾರ, ಸಾವಯವ ಗೊಬ್ಬರ ಮಾರಾಟದಿಂದಲೇ ಪ್ರತಿ ವರ್ಷ 6 ಲಕ್ಷ ಆದಾಯ ಗಳಿಸುತ್ತಿರುವುದು ವಿಶೇಷ. ವರ್ಷ ಪೂರ್ತಿ 5 ಜನರಿಗೆ ಕೆಲಸ ಕೊಟ್ಟಿದ್ದು, ಬೆಳೆ ಕೊಯ್ಲು, ಕಸ ತೆಗೆಯುವುದು ಸೇರಿ ಮತ್ತಿತರ ಸಂದರ್ಭದಲ್ಲಿ 50ಕ್ಕೂ ಅಧಿಕ ಜನರಿಗೆ ಉದ್ಯೋಗದಾತರಾಗಿದ್ದಾರೆ. ಪತ್ನಿ ಗೀತಾ, ಮಕ್ಕಳಾದ ಸುಧೀರ್, ತುಷಾರ್ ಸೇರಿ ಸೊಸೆಯಂದಿರು, ಮೊಮ್ಮಕ್ಕಳ ಜೊತೆಗೆ ಸುಖಿ ಕುಟುಂಬ ಇವರದ್ದಾಗಿದೆ. ಬೆಳಗಾವಿ ಎಪಿಎಂಸಿ ಅಧ್ಯಕ್ಷರಾಗಿಯೂ ನಾಗೇಶ ಗಡ್ಡೆ ಸೇವೆ ಸಲ್ಲಿಸಿದ್ದಾರೆ.
ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್: ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ನಾಗೇಶ ಗಡ್ಡೆ ಅವರು ಬಾರ್, ಕಿರಾಣಿ ಶಾಪ್, ಕೆರೆ- ಸರ್ಕಾರಿ ಕಟ್ಟಡ ನಿರ್ಮಾಣ ಗುತ್ತಿಗೆ, ಅರಣ್ಯದಲ್ಲಿ ಸಸಿ ನೆಡುವ ಗುತ್ತಿಗೆ ಕೆಲಸದ ಮೂಲಕ ಸಾಕಷ್ಟು ದುಡ್ಡು ಸಂಪಾದಿಸಿದ್ದರು. 2004ರಲ್ಲಿ ಇದೆಲ್ಲದಕ್ಕೂ ಗುಡ್ ಬೈ ಹೇಳಿ ಕೃಷಿಯತ್ತ ಮುಖ ಮಾಡಿದರು. ಈಗ ಅವರಿಗೆ 80 ವರ್ಷ ವಯಸ್ಸು. ಆದರೂ ಕೃಷಿಯಲ್ಲಿ ಪ್ರತಿದಿನವೂ ಹೊಸತನ ಹುಡುಕುವ ಅವರಲ್ಲಿನ ತುಡಿತ ಕಡಿಮೆ ಆಗಿಲ್ಲ. ಸಾವಯವ ಕೃಷಿಯಿಂದ ದೇಶವನ್ನು ರೋಗ ಮುಕ್ತ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಇವರ ಕೃಷಿ ಸಾಧನೆಗೆ ಕೃಷಿ ಇಲಾಖೆಯಿಂದ ಆತ್ಮ ಪ್ರಶಸ್ತಿ ಸಿಕ್ಕಿದೆ.
ವ್ಯವಸ್ಥಿತ ಕೃಷಿ ಮೂಲಕ ಸೈ ಎನಿಸಿಕೊಂಡಿರುವ ಗಡ್ಡೆ: ತಮ್ಮ ಮನೆ ಹತ್ತಿರ 50 ತೆಂಗು, 30 ಮಾವು ಸೇರಿ ಹಲಸು, ಬಾಳೆ, ಸೀತಾಫಲ, ನೇರಳೆ ಹಣ್ಣು, ಅರಿಶಿಣ, ಶುಂಠಿ, ತೆಂಗು, ಅಡಿಕೆ, ಲಿಂಬು ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆದಿದ್ದಾರೆ. ಇಲ್ಲಿಯೇ ಗೊಬ್ಬರ ತಯಾರಿಕಾ ಘಟಕಗಳನ್ನು ತೆರೆದಿದ್ದು, ಸಿಮೆಂಟ್ ಟಾಕಿ, ನೆಲದ ಮೇಲೆ ತಾಡಪತ್ರಿ ಬೆಡ್, ಅಂತರದ ಮೇಲೆ ತಾಡಪತ್ರಿ ಕಟ್ಟಿ ಗೊಬ್ಬರ ಸಿದ್ಧಪಡಿಸುತ್ತಿದ್ದಾರೆ. ತುಂಬಾ ವ್ಯವಸ್ಥಿತವಾಗಿ ಸಾವಯವ ಗೊಬ್ಬರ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನುಳಿದ 22 ಎಕರೆ ಜಮೀನು ಪೈಕಿ 11 ಎಕರೆ ಮಾತ್ರ ಉಳುಮೆ ಮಾಡುತ್ತಿದ್ದು, 850 ಮಾವು ಬೆಳೆದಿದ್ದಾರೆ. ಕಳೆದ ಆರು ವರ್ಷಗಳಿಂದ ಅವು ಫಲ ಕೊಡುತ್ತಿವೆ. ಇದರಿಂದ ಎಲ್ಲಾ ಖರ್ಚು ತೆಗೆದು ಪ್ರತಿ ವರ್ಷ 3 ಲಕ್ಷ ಆದಾಯ ಬರುತ್ತಿದೆ. ಸದ್ಯ 1 ಎಕರೆ ಅರಿಶಿಣ, 1 ಎಕರೆ ಅಲ್ಲಾ, 1 ಎಕರೆ ಅದ್ರಕ್, ಅರ್ಧ ಎಕರೆ ಮೆಣಸಿನಕಾಯಿ ಬೆಳೆದಿದ್ದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.
Laxmi News 24×7