Breaking News

ಅಕ್ರಮ ಬೆಟ್ಟಿಂಗ್​​ ಪ್ರಕರಣ: ಶಾಸಕ ಕೆ. ಸಿ. ವೀರೇಂದ್ರ ಇ.ಡಿ. ಕಸ್ಟಡಿ ಅವಧಿ ಸೆ.8ರ ವರೆಗೆ ವಿಸ್ತರಣೆ

Spread the love

ಬೆಂಗಳೂರು: ಆನ್​ಲೈನ್ ಹಾಗೂ ಆಫ್​ಲೈನ್ ಮುಖಾಂತರ ಅಕ್ರಮವಾಗಿ ಬೆಟ್ಟಿಂಗ್ ನಡೆಸಿದ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ. ಸಿ. ವೀರೇಂದ್ರ (ಪಪ್ಪಿ) ಅವರ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಇಂದು ಜನಪ್ರತಿನಿಧಿಗಳ ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು.

ಇದಕ್ಕೂ ಮುನ್ನ ಆರೋಪಿಯನ್ನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ವೀರೇಂದ್ರ ಅವರನ್ನು ಸೆಪ್ಟಂಬರ್​ 8ರ ವರೆಗೆ ಇ.ಡಿ. ಕಸ್ಟಡಿಗೆ ನೀಡುವಂತೆ ಆದೇಶಿಸಿತು. ಆರೋಪಿಗೆ ಗುಣಮಟ್ಟದ ಆಹಾರ ಹಾಗೂ ಮೂಲಭೂತಸೌಕರ್ಯ ಒದಗಿಸುವಂತೆ ಇ.ಡಿ.ಗೆ ಸೂಚಿಸಿತು.

ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಆರೋಪ: ಇದಕ್ಕೂ ಮುನ್ನ ವಾದ ಮಂಡಿಸಿದ ಇ.ಡಿ. ಪರ ವಕೀಲ ಪ್ರಮೋದ್ ಚಂದ್ರ ಅವರು, ಆರೋಪಿಗೆ ಸಂಬಂಧಿಸಿದ ಆನ್​​ಲೈನ್ ಬೆಟ್ಟಿಂಗ್ ಆ್ಯಪ್​ನಲ್ಲಿ ಸಾವಿರಾರು ಕೋಟಿ ಮೌಲ್ಯದ ವ್ಯವಹಾರ ನಡೆದಿದೆ. ಈ ಬಗ್ಗೆ ಡಿಜಿಟಲ್ ದಾಖಲಾತಿಗಳು ಸಂಗ್ರಹಿಸಬೇಕಾದ ಅಗತ್ಯವಿದೆ. ಇದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತಿದೆ. ಅಲ್ಲದೆ ವಿಚಾರಣೆಗೆ ಆರೋಪಿ ಸಹಕರಿಸುತ್ತಿಲ್ಲ. ಅಧಿಕಾರಿಗಳು ಕೇಳುವ ಪ್ರಶ್ನೆಗೆ ಉತ್ತರಿಸುತ್ತಿಲ್ಲ. ಹೀಗಾಗಿ 15 ದಿನಗಳ ಕಾಲ ಇ.ಡಿ. ವಶಕ್ಕೆ ನೀಡಬೇಕೆಂದು ಮನವಿ ಮಾಡಿದರು.

ಇನ್ನು ಎಷ್ಟು ದಿನ ಇಡಿ ವಶದಲ್ಲಿ ಶಾಸಕರು? ಇದಕ್ಕೆ ಆಕ್ಷೇಪಿಸಿದ ಆರೋಪಿ ಪರ ವಕೀಲ ಚಂದ್ರಮೌಳಿ, ಈಗಾಗಲೇ ಅಧಿಕಾರಿಗಳು ಎರಡು ಬಾರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶೇ.80 ರಷ್ಟು ವಿಚಾರಣೆ ಪೂರ್ಣಗೊಳಿಸಿದ್ಧಾರೆ. ಹೀಗಿದ್ದರೂ ಆರೋಪಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಇದುವರೆಗೂ ಆರೋಪಿಯನ್ನ ಕಸ್ಟಡಿಗೆ ಪಡೆದು ಏನು ಮಾಡಿದ್ದೀರಿ ? ಏನು ಮಾಡಬೇಕು ಎಂಬುದರ ಬಗ್ಗೆ ಕೋರ್ಟ್ ಗಮನಕ್ಕೆ ತರಬೇಕು. ಹೀಗಾಗಿ, ಆರೋಪಿಯನ್ನ ನ್ಯಾಯಾಂಗ ಬಂಧನದಲ್ಲಿಯೇ ಇ.ಡಿ ವಿಚಾರಣೆ ನಡೆಸಲಿ ಎಂದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ