Breaking News

ಎಡಪಂಥೀಯರಿಂದ ಧರ್ಮಸ್ಥಳ, ಹೆಗ್ಗಡೆಯವರ ಹೆಸರಿಗೆ ಕಳಂಕ ತರುವ ಕೆಲಸ’: ಹಾವೇರಿಯಲ್ಲಿ ಪ್ರತಿಭಟನೆ

Spread the love

ಹಾವೇರಿ: ಮೂಲಭೂತವಾದಿಗಳು ಹಾಗು ಎಡಪಂಥೀಯರು ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಮಂಗಳವಾರ ಹಾವೇರಿಯಲ್ಲಿ ಪ್ರತಿಭಟನೆ ನಡೆಸಿದವು.

ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಅಪಾರ ಸಂಖ್ಯೆಯಲ್ಲಿ ಸೇರಿದ ಜನರು, ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು.

ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ದೂರಿನ ಮೇರೆಗೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿ, ತನಿಖೆ ಮಾಡಿಸುತ್ತಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ತನಿಖೆ ನಡೆಯುತ್ತಿರುವಾಗ ಧರ್ಮಸ್ಥಳ ಪಾವಿತ್ರತೆಗೆ ಧಕ್ಕೆ ತರುವ ರೀತಿಯಲ್ಲಿ ವರದಿ ಬಿತ್ತರಿಸುತ್ತಿರುವುದು, ತನಿಖೆಗೆ ಮುನ್ನವೇ ಸಲ್ಲದ ಊಹೆಗಳನ್ನು ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳ ಸುಮಾರು 850 ವರ್ಷಗಳ ಇತಿಹಾಸವಿರುವ ಕ್ಷೇತ್ರ. ಈ ಕ್ಷೇತ್ರ ದಿನದಿಂದ ದಿನಕ್ಕೆ ಅಭಿವೃದ್ದಿಪಥದತ್ತ ದಾಪುಗಾಲಿಡುತ್ತಿದೆ. ಇದನ್ನು ಸಹಿಸಲಾಗದ ಮೂಲಭೂತವಾದಿಗಳು ಈ ರೀತಿಯ ಕಟ್ಟುಕಥೆಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ, ಅನಾಮಧೇಯ ವ್ಯಕ್ತಿಯ ಮುಖಾಂತರ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಧರ್ಮಸ್ಥಳ ಮತ್ತು ಹೆಗ್ಗಡೆಯವರ ತೇಜೋವಧೆ ಮಾಡುತ್ತಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.

ಧರ್ಮದ ಕಾಯದ ಮೂಲಕ ಧರ್ಮಸ್ಥಳವಾಗಿದೆ. ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ಜನರನ್ನು ಎತ್ತರಕ್ಕೇರಿಸಿದ ವೀರೇಂದ್ರ ಹೆಗ್ಗಡೆಯವರ ಮೇಲಿನ ಆರೋಪವನ್ನು ತಾವು ಖಂಡಿಸುವುದಾಗಿ ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನೆಯ ಭಾಗವಾಗಿ ಮುಂದಿನ ದಿನಗಳಲ್ಲಿ ಹಾವೇರಿ ಜಿಲ್ಲೆಯಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳಿ ಪಟ್ಟಭದ್ರಹಿತಾಸಕ್ತಿಗಳ ಕುತಂತ್ರವನ್ನು ಖಂಡಿಸುತ್ತೇವೆ ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ಬಸವರಾಜ್ ಅರಬಗೊಂಡ ತಿಳಿಸಿದರು.

ಸೌಜನ್ಯ ಕೊಲೆ ಪ್ರಕರಣವನ್ನು ಇಟ್ಟುಕೊಂಡು ಕೆಲವರು ಹಿಂದೂಗಳ ಶ್ರದ್ಧಾಕೇಂದ್ರವಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪಸ್ವಾಮಿ ಮೇಲೆ ಹಿಂದೂಗಳ ಶ್ರದ್ದೆಯನ್ನು ಕಡಿಮೆ ಮಾಡುವ ದೊಡ್ಡ ಷಡ್ಯಂತ್ರ ರೂಪಿಸಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ಹಣಕಾಸಿನ ಮೂಲವನ್ನು ಕಂಡುಹಿಡಿಯಬೇಕು. ನಾವು ಇದುವರೆಗೂ ಸಂಯಮದಿಂದ ಕಾದಿದ್ದೇವೆ. ರಾಜ್ಯ ಸರ್ಕಾರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ಮೇಲೆ ಕಳಂಕ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕ್ಷೇತ್ರದ ಭಕ್ತರೇ ಅವರಿಗೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ