ಬೆಳ್ತಂಗಡಿ, ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನಾಲ್ವರು ಯೂಟ್ಯೂಬರ್ಗಳು ಮತ್ತು ಮಾಧ್ಯಮ ಸಿಬ್ಬಂದಿ ಮೇಲೆ ಅಪರಿಚಿತರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ಬುಧವಾರ ಸಂಜೆ ನಡೆದಿದೆ.
ಅಜಯ್ ಅಂಚನ್, ಅಭಿಷೇಕ್, ವಿಜಯ್ ಮತ್ತು ಇನ್ನೋರ್ವರು ಹಲ್ಲೆಗೆ ಒಳಗಾದ ಯೂಟ್ಯೂಬರ್ ಗಳು ಎಂದು ತಿಳಿದು ಬಂದಿದೆ. ಅಪರಿಚಿತರು ಯೂಟ್ಯೂಬರ್‌ಗಳಿಗೆ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಭದ್ರತೆ ಒದಗಿಸಿದರು. ಹಲ್ಲೆಗೊಳಗಾದ ಯೂಟ್ಯೂಬರ್ಗಳು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಎಸ್ ಪಿ ಅರುಣ್ ಕುಮಾರ್ ಅವರ ಕಚೇರಿ ಪತ್ರಿಕಾ ಪ್ರಕಟಣೆ ನೀಡಿದ್ದು,
ಧರ್ಮಸ್ಥಳದಲ್ಲಿ ಇಂದು ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಪರಿಸ್ಥಿತಿ ಪ್ರಸ್ತುತ ಶಾಂತವಾಗಿದ್ದು, ಸೇರಿದ್ದ ಜನರನ್ನು ಚದುರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಮತ್ತು ಅವರುಗಳ ಎರಡು ವಾಹನಗಳಿಗೆ ಹಾನಿ ನಡೆಸಿದ ಬಗ್ಗೆ ಹಾಗೂ ಖಾಸಗಿ ನ್ಯೂಸ್ ಚಾನೆಲ್ನ ವರದಿಗಾರನ ಮೇಲೆ ನಡೆದ ಹಲ್ಲೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗುತ್ತಿದೆ. ಧರ್ಮಸ್ಥಳ ಪಾಂಗಾಳದಲ್ಲಿ (ಲಾಠಿ ಚಾರ್ಜ್ ನಡೆದ ಸ್ಥಳದಲ್ಲಿ), ಧರ್ಮಸ್ಥಳ ಪೊಲೀಸ್ ಠಾಣಾ ಆವರಣದಲ್ಲಿ ಮತ್ತು ಆಸ್ಪತ್ರೆಯ ಮುಂದೆ ಕಾನೂನುಬಾಹಿರವಾಗಿ ಗುಂಪು ಸೇರಿರುವ ಬಗ್ಗೆ ಪ್ರಕರಣ ದಾಖಲಿಸಲಾಗುತ್ತಿದೆ
Laxmi News 24×7