ಬೆಂಗಳೂರು: ನಗರದಲ್ಲಿ ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದೆ. ಕಳೆದ 10 ದಿನಗಳ ಹಿಂದಷ್ಟೇ ಇಲ್ಲಿನ ಪೇಯಿಂಗ್ ಗೆಸ್ಟ್ (ಪಿಜಿ)ನಲ್ಲಿ ಸೇರಿದ್ದ ಕೇರಳದ 20 ವರ್ಷದ ವಿದ್ಯಾರ್ಥಿನಿ ಮೇಲೆ ಅದರ ಮಾಲೀಕನೇ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ಕೃತ್ಯಕ್ಕೂ ಮೊದಲು ಆತ ಯುವತಿಯ ಮೇಲೆ ಹಲ್ಲೆ ಮಾಡಿದ್ದ ಎಂದು ಆರೋಪಿಸಲಾಗಿದೆ.
ಯುವತಿ ನೀಡಿರುವ ದೂರಿನ ಪ್ರಕಾರ, ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಆರೋಪಿ, ಪಿಜಿ ಮಾಲೀಕ ಅಶ್ರಫ್ ಎಂಬಾತನನ್ನು ಇಂದು (ಭಾನುವಾರ) ಬಂಧಿಸಿದ್ದಾರೆ. ಪ್ರಕರಣದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ನಗರದ ಸೋಲದೇವನಹಳ್ಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕೇರಳದ ಯುವತಿ 10 ದಿನಗಳ ಹಿಂದೆಯಷ್ಟೇ ಆರೋಪಿ ಅಶ್ರಫ್ ಒಡೆತನದ ಪಿ.ಜಿಗೆ ಸೇರಿದ್ದಳು. ಶುಕ್ರವಾರ ರಾತ್ರಿ ತನ್ನನ್ನು ಕಾರಿನಲ್ಲಿ ಕರೆದೊಯ್ದಿದ್ದ ಅಶ್ರಫ್, ನಿರ್ಜನ ಪ್ರದೇಶದಲ್ಲಿ ದೌರ್ಜನ್ಯವೆಸಗಿದ್ದ. ಬಳಿಕ ತನ್ನ ಪೇಯಿಂಗ್ ಗೆಸ್ಟ್ಗೆ ವಾಪಸ್ ಕರೆತಂದು ಬಿಟ್ಟಿದ್ದ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.
ಅತ್ಯಾಚಾರ ಎಸಗಲು ಪ್ರಯತ್ನಿಸಿದಾಗ, ವಿರೋಧಿಸಿದ್ದಕ್ಕೆ ಆತ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಯುವತಿ ದೂರಿದ್ದಾಳೆ. ಘಟನೆಯಿಂದ ಆಘಾತಕ್ಕೊಳಗಾಗಿದ್ದ ಸಂತ್ರಸ್ತೆ ಸ್ನೇಹಿತರ ಸಹಾಯದಿಂದ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Laxmi News 24×7