Breaking News

ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮ ಮುಂದೂಡಿ: ಇನ್ನೊಂದು ದಿನ ನಿಗದಿಗೆ ಕೋರಿ ಕೇಂದ್ರ ಸಚಿವ ಗಡ್ಕರಿಗೆ ಸಿಎಂ ಪತ್ರ

Spread the love

ಬೆಂಗಳೂರು: ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮದ ಬಗ್ಗೆ ಮುಂಗಡವಾಗಿ ನನಗೆ ಮಾಹಿತಿ ನೀಡಿಲ್ಲ. ಹೀಗಾಗಿ ಕಾರ್ಯಕ್ರಮವನ್ನು ಮುಂದೂಡಿ, ಇನ್ನೊಂದು ದಿನ ನಿಗದಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸೋಮವಾರ (ಜುಲೈ 14) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬಹು ನಿರೀಕ್ಷಿತ ಸಿಗಂದೂರು ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಲಿದ್ದಾರೆ.‌ ಆದರೆ, ತಮಗೆ ಮುಂಚಿತವಾಗಿ ಲೋಕಾರ್ಪಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.‌

ಈ ಬಗ್ಗೆ ನಿತಿನ್ ಗಡ್ಕರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಸಾಗರ ತಾಲೂಕಿನ ನೆಹರು ಮೈದಾನದಲ್ಲಿ ಲೋಕಾರ್ಪಣೆ ಹಾಗೂ ವಿವಿಧ ಯೋಜನೆಗಳಿಗೆ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಕರಡು ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ನಮೂದಿಸಲಾಗಿದೆ. ಆದರೆ, ನನಗೆ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ.

ಸೋಮವಾರ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ವಿವಿಧ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೇನೆ. ರಾಜ್ಯ ಮಟ್ಟದ ಇಂಥ ಕಾರ್ಯಕ್ರಮಗಳನ್ನು ನಿಗದಿ ಪಡಿಸುವಾಗ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ, ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ಮಾಡುವುದು ಸೂಕ್ತವಾಗಿದೆ. ಹಾಗಾಗಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವಾಗ ರಾಜ್ಯ ಸರ್ಕಾರದ ಜೊತೆ ಸಮನ್ವಯತೆ ಸಾಧಿಸುವಂತೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯಕ್ಕೆ ಸೂಚನೆ ನೀಡುವಂತೆ ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

ಸೋಮವಾರ ನಿಗದಿಗೊಳಿಸಿರುವ ಈ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಂದೂಡಿ, ಇನ್ನೊಂದು ದಿನ ನಿಗದಿಗೊಳಿಸಲು ತಮ್ಮಲ್ಲಿ ಮನವಿ ಮಾಡುತ್ತೇನೆ. ಇದರಿಂದ ಇಂಥ ಮಹತ್ವದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನನಗೆ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಆದ್ರೆ ಈಗಾಗಲೇ ನಿಗದಿಯಾಗಿರುವಂತೆ 6 ದಶಕಗಳ ಹೋರಾಟದ ಫಲವಾದ ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆ ಜುಲೈ 14ರಂದು ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ತೂಗು ಸೇತುವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ವರದಿಯಾಗಿದೆ. ಈ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಗಡ್ಕರಿ ಅವರಿಗೆ ಪತ್ರ ಬರೆದು ಉದ್ಘಾಟನೆಯನ್ನು ಮುಂದೂಡುವಂತೆ ಮನವಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಮತ್ತೊಂದೆಡೆ ಈಗಾಗಲೇ ಸೇತುವೆ ಉದ್ಘಾಟನೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅದರ ಪ್ರಕಾರ ಇಂದು ನಿಗದಿಯಾದ ಮುಹೂರ್ತದಲ್ಲೇ ಸೇತುವೆ ಉದ್ಘಾಟನೆ ಆಗಲಿದೆ ಎಂದು ವರದಿಯಾಗಿದೆ.

ಸೇತುವೆಯಿಂದ ಏನೆಲ್ಲಾ ಅನುಕೂಲ: ತುರ್ತು ಪರಿಸ್ಥಿತಿಯಲ್ಲಿ ಲಾಂಚ್ ಉಪಯೋಗಕ್ಕೆ ಬರುತ್ತಿರಲಿಲ್ಲ.‌ ಲಾಂಚ್ ಸೇವೆ ಬೆಳಗ್ಗೆ 7ರಿಂದ ಸಂಜೆ 7ರ ತನಕ ಮಾತ್ರ ಇರುತಿತ್ತು. ರಾತ್ರಿ ವೇಳೆ ಅನಾರೋಗ್ಯ, ಬೇರೆ ಊರಿಗೆ ಹೋಗಬೇಕೆಂದರೆ ಸಾಧ್ಯವಾಗುತ್ತಿರಲಿಲ್ಲ.‌ ತುರ್ತು ಪರಿಸ್ಥಿತಿಯಲ್ಲಿ ಸಾಗರ ಪೇಟೆಗೆ ಬರಬೇಕೆಂದರೆ 70 ಕಿಲೋ ಮೀಟರ್​ ಸುತ್ತಿ ಹೋಗಬೇಕಾಗಿತ್ತು. ಈ ಆದ್ರೆ ಈಗ ಸೇತುವೆ ನಿರ್ಮಾಣದಿಂದ ಆ ಎಲ್ಲಾ ತೊಂದರೆಗಳು ದೂರ ಮರೆಯಾಗುತ್ತವೆ. ಗರ್ಭಿಣಿಯರು, ವಯಸ್ಸಾದವರಿಗೆ ಸಂಚಾರಕ್ಕೆ ಸೇತುವೆಯಿಂದ ಅನುಕೂಲ ಆಗಲಿದೆ.

ಈ ಸೇತುವೆ ನಿರ್ಮಾಣದಿಂದ ಕೊಲ್ಲೂರು, ಮಂಗಳೂರಿಗೆ ಸಂಪರ್ಕ ಸಾಧ್ಯವಾಗುತ್ತದೆ. ಹಿನ್ನೀರಿನ ದ್ವೀಪದ ಜನತೆಗೆ ಸೇತುವೆ ಬೇಕು ಎಂಬ ಕನಸು ಕೊನೆಗೂ ಈಡೇರಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ