Breaking News

ಮದ್ಯದಂಗಡಿ ನವೀಕರಣ ಶುಲ್ಕ ಶೇ.50ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರದ ಆದೇಶ

Spread the love

ಬೆಂಗಳೂರು: ಮದ್ಯದಂಗಡಿ ಮಾಲೀಕರ ವಿರೋಧದ ಹಿನ್ನೆಲೆ ಪರವಾನಗಿ ನವೀಕರಣ ಶುಲ್ಕ ಶೇ.50 ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಅಂತಿಮ ಆದೇಶ ಹೊರಡಿಸಿದೆ. ಜುಲೈ 1ರಿಂದ ಈ ಪರಿಷ್ಕೃತ ನವೀಕರಣ ಶುಲ್ಕ ಜಾರಿಗೆ ಬರಲಿದೆ.

ಈ ಮುಂಚೆ ರಾಜ್ಯ ಸರ್ಕಾರದ ಪರವಾನಗಿ ಶುಲ್ಕ ಶೇ.100ರಷ್ಟು ಹೆಚ್ಚಿಸಿ ಕರಡು ಅಧಿಸೂಚನೆ ಹೊರಡಿಸಿತ್ತು.‌ ಆದರೆ, ಮದ್ಯದಂಗಡಿ ಮಾಲೀಕರಿಂದ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮದ್ಯದಂಗಡಿ ಮಾಲೀಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನವೀಕರಣ ಶುಲ್ಕ ಶೇ.100ರಷ್ಟು ಹೆಚ್ಚಳ ಪ್ರಸ್ತಾಪದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸರ್ಕಾರ ಮದ್ಯದಂಗಡಿ ಮಾಲೀಕರ ಮನವಿಯನ್ನು ಪರಿಗಣಿಸಿ ಪರವಾನಗಿ ನವೀಕರಣ ಶುಲ್ಕವನ್ನು ಶೇ.50ರಷ್ಟು ಹೆಚ್ಚಿಸಿ ಅಂತಿಮ ಆದೇಶ ಹೊರಡಿಸಿದೆ.

ಶೇ.100ರಷ್ಟು ಪರವಾನಗಿ ನವೀಕರಣ ಶುಲ್ಕ ಹೆಚ್ಚಳ ಪ್ರಸ್ತಾಪ ಖಂಡಿಸಿ ಮದ್ಯದಂಗಡಿ ಮಾಲೀಕರು ಲಿಕ್ಕರ್ ಶಾಪ್ ಬಂದ್ ಮಾಡಿ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಭರವಸೆ ಬಳಿಕ ಮುಷ್ಕರದಿಂದ ಹಿಂದೆ ಸರಿದಿದ್ದರು. ಅಂಗಡಿ ಮಾಲೀಕರ ಒಕ್ಕೂಟ ಮದ್ಯದಂಗಡಿ ಪರವಾನಗಿ ನವೀಕರಣ ಶುಲ್ಕ ಶೇ.25ರಷ್ಟು ಮಾತ್ರ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಆದರೆ, ಇದೀಗ ರಾಜ್ಯ ಸರ್ಕಾರ ಲೈಸೆನ್ಸ್ ನವೀಕರಣ ಶುಲ್ಕವನ್ನು ಉದ್ದೇಶಿತ ಶೇ.100ರಷ್ಟು ಹೆಚ್ಚಿಸುವ ಬದಲು ಶೇ. 50ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.

ಜೊತೆಗೆ ಹಾಲಿ ಇದ್ದ ಅಬಕಾರಿ ಪರವಾನಗಿ ವಾರ್ಷಿಕ ನವೀಕರಣದ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜುಲೈ 1ರಿಂದ ಅನ್ವಯವಾಗಲಿದೆ. ಈಗ ಎಲ್ಲ ಬಗೆಯ ಸನ್ನದುಗಳ ಶುಲ್ಕ ಹೆಚ್ಚಳ ಮಾಡಿದ್ದು, ಆ ಮೂಲಕ ವಾರ್ಷಿಕ ಸುಮಾರು 300 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಮದ್ಯದಂಗಡಿ ಪರಿಷ್ಕೃತ ನವೀಕರಣ ಶುಲ್ಕ: ಚಿಲ್ಲರೆ ಮದ್ಯದಂಗಡಿಗಳಿಗೆ – 20 ಲಕ್ಷಗಳಿಗಿಂತ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ಮಹಾನಗರ ಪಾಲಿಕೆ ಪ್ರದೇಶಗಳ ಮದ್ಯದಂಗಡಿ ಸನ್ನದು ನವೀಕರಣ ಶುಲ್ಕ ಪ್ರತಿ ವರ್ಷ 9,00,000 ರೂ., ಇತರ ಮಹಾನಗರ ಪಾಲಿಕೆ ಪ್ರದೇಶಗಳ ವ್ಯಾಪ್ತಿಯಲ್ಲಿ ಪ್ರತಿ ವರ್ಷ 7,50,000 ರೂ., ನಗರಸಭೆ ಪ್ರದೇಶಗಳ ವ್ಯಾಪ್ತಿಯಲ್ಲಿ ಪ್ರತಿ ವರ್ಷ 6,75,000 ರೂ., ಪಟ್ಟಣ ಪುರಸಭೆ ಪ್ರದೇಶಗಳು/ಪಟ್ಟಣ ಪಂಚಾಯಿತಿ ಪ್ರದೇಶಗಳ ವ್ಯಾಪ್ತಿಯಲ್ಲಿ ಪ್ರತಿವರ್ಷ 6 ಲಕ್ಷ ರೂ.ಗೆ ಏರಿಕೆಯಾಗಿದೆ.


Spread the love

About Laxminews 24x7

Check Also

ಹೋರಾಟ ಮಾಡಿದವರು ನಿರುದ್ಯೋಗಿಗಳು: ಬಿಜೆಪಿ ಹೋರಾಟಗಾರರ ವಿರುದ್ಧ ಗುಡುಗಿದ ಶಾಸಕ ಬಸವರಾಜ್ ಶಿವಗಂಗಾ

Spread the loveದಾವಣಗೆರೆ : ನಿನ್ನೆ ಹೋರಾಟ ಮಾಡಿದವರು ನಿರುದ್ಯೋಗಿಗಳು ಎಂದು ಬಿಜೆಪಿ ಹೋರಾಟಗಾರರ ವಿರುದ್ಧ ಶಾಸಕ ಬಸವರಾಜ್ ಶಿವಗಂಗಾ ಗುಡುಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ