Breaking News

ಇಂಗ್ಲೆಂಡ್ ಯುವತಿಯನ್ನು ಪ್ರೀತಿಸಿ ಮದುವೆಯಾದ ಗಂಗಾವತಿ ಹುಡುಗ

Spread the love

ಗಂಗಾವತಿ (ಕೊಪ್ಪಳ) : India weds London ಸ್ನೇಹ – ಪ್ರೀತಿಗೆ ಯಾವುದೇ ಭಾಷೆ, ಗಡಿ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಆಕಸ್ಮಿಕ ಪರಿಚಯ ಸ್ನೇಹಕ್ಕೆ ತಿರುಗಿ, ಅದು ಪ್ರೀತಿಯಲ್ಲಿ ಮಿಂದೆದ್ದು ವಿವಾಹ ಎಂಬ ಬಾಳ ಬಂಧನದಲ್ಲಿ ಬೆಸುಗೆಯಾದ ಕತೆಯಿದು. ಈ ಪ್ರಣಯದ ಹಕ್ಕಿಗಳು, ಭಾಷೆ – ದೇಶ, ಧರ್ಮ – ಜಾತಿಯಂತಹ ಗಡಿಗಳನ್ನು ದಾಟಿ ಶುಕ್ರವಾರ ಕಂಕಣ ಕಟ್ಟಿಕೊಂಡಿವೆ.

ಹುಡುಗಿಯದ್ದು ದೂರದ ಇಂಗ್ಲೆಂಡ್, ಹುಡುಗನದ್ದು ಗಂಗಾವತಿಯ ಅಂಜನಾದ್ರಿ ಸಮೀಪದ ಸಣಾಪುರ ಎಂಬ ಪುಟ್ಟ ಗ್ರಾಮ. ಎಲ್ಲಿಯ ಇಂಗ್ಲೆಂಡ್, ಎಲ್ಲಿಯ ಭಾರತ?. ದೇಶ ಬೇರೆ, ಭಾಷೆ ಬೇರೆ, ಧರ್ಮ-ಜಾತಿ ಮೊದಲೇ ಬೇರೆ ಬೇರೆ. ಆದರೆ ಈ ಹುಡುಗ ಮತ್ತು ಹುಡುಗಿಯ ಮಧ್ಯೆ ಚಿಗುರೊಡೆದ ಪ್ರೀತಿ, ಸಪ್ತ ಹೆಜ್ಜೆಗಳ ಸಮ್ಮಿಲನಕ್ಕೆ ಕಾರಣವಾಗಿದೆ.

ಅಂದ ಹಾಗೆ ಗಂಗಾವತಿ ತಾಲೂಕಿನ ಸಣಾಪುರದ ನಿವಾಸಿ ಮುರಳಿ ಎಂಬ ಯುವಕ, ವೃತ್ತಿಯಲ್ಲಿ ಪ್ರವಾಸಿ ಮಾರ್ಗದರ್ಶಕ, ಗೆಸ್ಟ್​ಹೌಸ್ ಮಾಲೀಕ. ಇದೀಗ ಈತ ಸಿನಿಮಾ ರಂಗ ಕಲೆಯಲ್ಲಿ ಕತೆ ಬರೆಯುವ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಎಂಬ ಲಂಡನ್ ಯುವತಿಯನ್ನು ಶುಕ್ರವಾರ ಅಧಿಕೃತವಾಗಿ ವಿವಾಹವಾಗಿದ್ದಾರೆ.

ಕೊಪ್ಪಳ ತಾಲೂಕಿನ ಬಸಾಪುರ ಎಂಬ ಗ್ರಾಮದಲ್ಲಿರುವ ಮುರುಳಿ ಗೆಸ್ಟ್​ಹೌಸ್​​ನಲ್ಲಿ ಈ ಇಬ್ಬರು ಬೆಳಗ್ಗೆ 6.59 ನಿಮಿಷದ ಸುಮಹೂರ್ತದಲ್ಲಿ ಬಾಳ ಬಂಧನದ ಬೆಸುಗೆಯಲ್ಲಿ ಬಂಧಿಗಳಾದರು. ವಿವಾಹ ಮಹೂರ್ತಕ್ಕೆ ವಧು ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಅವರ ತಂದೆ-ತಾಯಿ ಸೇರಿದಂತೆ ಹತ್ತಕ್ಕೂ ಹೆಚ್ಚು ಕುಟುಂಬ ಸದಸ್ಯರು ಕಳೆದ ಎರಡು ದಿನಗಳ ಹಿಂದೆಯೇ ಭಾರತಕ್ಕೆ ಬಂದಿದ್ದರು.

ಭಾರತೀಯ ಸಂಪ್ರದಾಯದ ಉಡುಪುಗಳಲ್ಲಿ ಬ್ರಿಟನ್ ಪ್ರಜೆಗಳು ಕಂಗೊಳಿಸಿದರು. ಪುರುಷರು ಬಿಳಿ ಪಂಚೆ-ಬಿಳಿ ಶರ್ಟ್​ಗಳಲ್ಲಿ, ಮಹಿಳೆಯರು ಜರಿಜರಿಯಾದ ಸೀರೆಗಳಲ್ಲಿ ಕಂಗೊಳಿಸಿದರು. ಹಿಂದೂ ಸಂಪ್ರದಾಯದಂತೆ ಮಗಳನ್ನು ಹುಡುಗನಿಗೆ ಧಾರೆ ಎರೆದುಕೊಟ್ಟರು.

ಇದಕ್ಕೂ ಮೊದಲು ಅಂದರೆ ಕಳೆದ ಏಪ್ರಿಲ್ 3ಕ್ಕೆ ಗಂಗಾವತಿಯ ಉಪ ನೊಂದಣಿ ಕಚೇರಿಯಲ್ಲಿ ಈ ಇಬ್ಬರು ತಮ್ಮ ಆಪ್ತ ಬಳಗದ ಬೆರಳೆಣಿಕೆಯಷ್ಟು ಸ್ನೇಹಿತರ ಸಮ್ಮುಖದಲ್ಲಿ ಮದುವೆಯನ್ನು ನೋಂದಣಿ ಮಾಡಿಸಿಕೊಂಡು, ವಿವಾಹ ಬಂಧನಕ್ಕೆ ಮುದ್ರೆಯೊತ್ತಿಸಿಕೊಂಡಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ