ಬೆಂಗಳೂರು: ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಮತ್ತು ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಬರುವ ಖಾಸಗಿ ಬಡಾವಣೆಗಳ ಅನುಮೋದನೆಗೆ ಇನ್ನು ಮುಂದೆ ಸರ್ಕಾರದ ಸಹಮತಿ ಪಡೆಯಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ ಸೂಚಿಸಿದ್ದಾರೆ.
“ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳು ಸಾಧಿಸಿರುವ ಪ್ರಗತಿ ಕುರಿತಂತೆ ವಿಕಾಸಸೌಧದಲ್ಲಿ ಸೋಮವಾರ ಪರಿಶೀಲನಾ ಸಭೆ ನಡೆಸಿದ ಸಚಿವರು, ಖಾಸಗಿಯವರು ಭೂಮಿಯನ್ನು ಹೊಂದಿಸಿ/ಖರೀದಿಸಿ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರುವಾಗ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಅದು ಏಕೆ ಸಾಧ್ಯವಾಗುತ್ತಿಲ್ಲ” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
“ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯನ್ನು ರಚಿಸಿರುವುದು ಪ್ರಾಧಿಕಾರಗಳು ಬಡಾವಣೆಗಳನ್ನು ನಿರ್ಮಿಸಿ ರಾಜ್ಯದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನಗಳು ಸಿಗುವಂತಾಗಲಿ ಎನ್ನುವ ಉದ್ದೇಶದಿಂದಲೇ ಹೊರತು ಖಾಸಗಿ ಬಡಾವಣೆಗಳ ನಿರ್ಮಾಣ ಮತ್ತು ನಕ್ಷೆಗೆ ಅನುಮೋದನೆ ನೀಡಲು ಅಲ್ಲ” ಎಂದರು.
“ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಒಂದು ರೀತಿಯ ನಿಯಮಗಳು ಅನ್ವಯಿಸಿದರೆ ಸರ್ಕಾರದ ವತಿಯಿಂದ (ನಗರಾಭಿವೃದ್ಧಿ ಪ್ರಾಧಿಕಾರಗಳ ವತಿಯಿಂದ) ನಿರ್ಮಾಣಕ್ಕೆ ಒಂದು ರೀತಿಯ ನಿಯಮಗಳಿವೆ. ಇದು ತಾರತಮ್ಯದಿಂದ ಕೂಡಿದೆ. ಹೀಗಾಗಿ ಎಲ್ಲದಕ್ಕೂ ಅನ್ವಯವಾಗುವಂತೆ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕು” ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದರು.
“ಮನವೊಲಿಸಿ ರೈತರಿಂದ ಜಮೀನು ಪಡೆದು 50:50ರ ಅನುಪಾತದ ಅಡಿಯಲ್ಲಿ ಅಭಿವೃದ್ಧಿಪಡಿಸಿ ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡುವುದು ಪ್ರಾಧಿಕಾರಗಳ ಕೆಲಸ. ಅದನ್ನು ಬಿಟ್ಟು ಖಾಸಗಿ ಬಡಾವಣೆ ನಿರ್ಮಾಣ ಮತ್ತು ನಕ್ಷೆಗೆ ಅನುಮೋದನೆ ನೀಡುವುದಷ್ಟೇ ಕೆಲಸವಲ್ಲ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯನ್ವಯ ನಾಗರಿಕ ಸೌಲಭ್ಯ ನಿವೇಶನ ಮೀಸಲು, ಒಳಚರಂಡಿ ವ್ಯವಸ್ಥೆ, ಉದ್ಯಾನವನ, ರಸ್ತೆಗಳ ನಿರ್ಮಾಣ ನಿಯಮಾವಳಿಗಳಂತೆ ಖಾಸಗಿ ಬಡಾವಣೆಗಳಲ್ಲಿ ತರಲು ಸಾಧ್ಯವಿದೆ. ಸರ್ಕಾರದ ವತಿಯಿಂದ ಅಂದರೆ ನಗರಾಭಿವೃದ್ಧಿ ಪ್ರಾಧಿಕಾರಗಳು /ನಗರ ಯೋಜನಾ ಪ್ರಾಧಿಕಾರಗಳ ವತಿಯಿಂದ ಬಡಾವಣೆಗಳು ನಿರ್ಮಾಣವಾದರೆ, ಆ ಜಮೀನುಗಳಲ್ಲಿ ತಕಾರರು/ವ್ಯಾಜ್ಯಗಳು ಇರುವುದಿಲ್ಲ. ನಕ್ಷೆ ಕಾನೂನು ರೀತಿಯಲ್ಲಿ ಇರುತ್ತದೆ. ಇದರ ಜೊತೆಗೆ ಸರ್ಕಾರದ/ನಗರಾಭಿವೃದ್ಧಿ ಪ್ರಾಧಿಕಾರಗಳ ಮೇಲೆ ಜನ ಸಾಮಾನ್ಯರಿಗೆ ಗೌರವ ಹೆಚ್ಚಾಗುತ್ತದೆ” ಎಂದು ತಿಳಿಸಿದರು.
Laxmi News 24×7