ಬೆಳಗಾವಿ: 2023-24ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರ ಜಿಲ್ಲಾ ಪುರಸ್ಕಾರ, ಅತ್ಯುತ್ತಮ ಗ್ರಾಮ ಪಂಚಾಯಿತಿ, ಉತ್ತಮ ಕಾಯಕ ಬಂಧು ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳು ಬೆಳಗಾವಿ ಜಿಲ್ಲೆಗೆ ಒಲಿದಿವೆ.
ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನರೇಗಾ ಹಬ್ಬ-2025 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಂಕ್ ಖರ್ಗೆ ಅವರು ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪ, ಎಡಿಪಿಸಿ ಬಸವರಾಜು, ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ಗೋಡೆಕರ್ ಅವರಿಗೆ ಅಮೃತ ಸರೋವರ ಜಿಲ್ಲಾ ಪುರಸ್ಕಾರ ನೀಡಿ ಗೌರವಿಸಿದರು.ಹಾಗೆಯೇ ಬೆಳಗಾವಿ ಜಿಲ್ಲೆಯ ಕೃಷಿ ಮತ್ತು ಜಲಾನಯನ ಹಾಗೂ ಅರಣ್ಯ ಇಲಾಖೆಗೆ ಅತ್ಯುತ್ತಮ ಜಿಲ್ಲಾ ಒಗ್ಗೂಡಿಸುವಿಕೆ ಪುರಸ್ಕಾರವನ್ನು ಜಿಪಂ ಸಿಇಒ ರಾಹುಲ್ ಶಿಂಧೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿ ಅವರು ಸ್ವೀಕರಿಸಿದರು.ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮ ಪಂಚಾಯಿತಿಯು ಅತ್ಯುತ್ತಮ ಗ್ರಾಮ ಪಂಚಾಯಿತಿ ಪುರಸ್ಕಾರಕ್ಕೆ ಭಾಜನವಾಗಿದ್ದು, ಪ್ರಶಸ್ತಿಯನ್ನು ತಾಲೂಕು ಪಂಚಾಯತಿ ಇಒ ಟಿ.ಆರ್.ಮಲ್ನಾಡದ, ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣ, ಗ್ರಾಪಂ ಅಧ್ಯಕ್ಷ ಬಸವರಾಜ ಗೊಸುರಿ ಹಾಗೂ ಪಿಡಿಒ ನಿರಂಜನ ಕುರಬೆಟ್ಟ ಅವರು ಸ್ವೀಕರಿಸಿದರು.
Laxmi News 24×7